ಅಪರಾಧಕರ್ನಾಟಕ

ಸೂಸೈಡ್ ಸ್ಪಾಟ್ ಆಗುತ್ತಿದೆ ಭಟ್ಟರಹಳ್ಳಿ ಕೆರೆ!

ಪ್ರತಿನಿತ್ಯ ಮಕ್ಕಳು, ವಯೋವೃದ್ಧರು ಓಡಾಡುವ ಜಾಗ

ಕೆ.ಆರ್.ಪುರ:
ಭರ್ಜರಿ ಮಳೆಯಾಗುತ್ತಿರುವ ಪರಿಣಾಮವಾಗಿ ರಾಜ್ಯದ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಈವರೆಗೆ ಬರುಡಾಗಿದ್ದ ಕೆರೆಗಳು ಮೈದುಂಬಿ ಹರಿಯುವುದನ್ನು ನೋಡುವುದೇ ಕಣ್ಣಿಗಾನಂದ. ಆದರೆ, ಸ್ಥಳೀಯ ಆಡಳಿತಾಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಅದೇ ಕೆರೆಗಳಿಂದ ಜೀವಹಾನಿ ಸಂಭವಿಸುವ ಆತಂಕವೂ ಇದೆ. ಇದಕ್ಕೆ ಸೂಕ್ತ ನಿದರ್ಶನವೆಂದರೆ ಕೆ.ಆರ್.ಪುರ ಸಮೀಪವಿರುವ ಭಟ್ಟರಹಳ್ಳಿ ಕೆರೆ…!
ಹೌದು, ಭಟ್ಟರಹಳ್ಳಿ ಕೆರೆ ಜೀವ ತೆಗೆಯಲು ಕಾದಂತಿದೆ. ಕೆರೆಯ ಸುತ್ತಲೂ ತಂತಿಬೇಲಿ ಆಗಲಿ, ಎಚ್ಚರಿಕೆ ಫಲಕಗಳಾಗಲಿದೆ ಹಾಕಿಲ್ಲ. ಪ್ರತಿನಿತ್ಯ ಮಕ್ಕಳು, ಮಹಿಳೆಯರು, ವೃದ್ಧರು ಓಡಾಡುತ್ತಿರುತ್ತಾರೆ. ಆದರೆ, ಜನರ ರಕ್ಷಣೆಗಾಗಿ ತಂತಿಬೇಲಿ ಅಳವಡಿಸುವ ಕೆಲಸ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಆಗಿಲ್ಲ. ಇದಲ್ಲದೇ ಭಟ್ಟರಹಳ್ಳಿ ಕೆರೆ ಇತ್ತೀಚೆಗೆ ಆತ್ಮಹತ್ಯೆಯ ತಾಣವಾಗಿ ಮಾರ್ಪಾಡುಗುತ್ತಿರುವುದು ಇನ್ನೊಂದು ರೀತಿಯ ಭೀತಿ ಸೃಷ್ಟಿಸಿದೆ.
ಭಟ್ಟರಹಳ್ಳಿ ಕೆರೆ ಸುಮಾರು 18 ಎಕರೆ ವಿಸ್ತೀರ್ಣ ಹೊಂದಿದೆ. 4 ತಿಂಗಳ ಹಿಂದೆ ಮನೆಯಲ್ಲಿ ಜಗಳವಾಡಿಕೊಂಡು ಬಂದ ಯುವತಿಯೊಬ್ಬಳು ಇದೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶುಕ್ರವಾರ ಇನೊಬ್ಬ ಮಹಿಳೆಯ ಶವ ಪತ್ತೆಯಾಗಿದೆ. ಈಕೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾಳೋ ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವರ ಕಲೆಹಾಕುತ್ತಿದ್ದಾರೆ.
ಸಾವಿಗೆ ಕಾರಣ ಏನೇ ಇರಬಹುದು. ಆದರೆ, ಭಟ್ಟರಹಳ್ಳಿ ಕೆರೆಗೆ ಯಾವುದೇ ತಂತಿಬೇಲಿ ಇಲ್ಲದಿರುವುದರಿಂದ ಕೆರೆಯ ಎಲ್ಲಾ ಕಡೆಗೂ ಸಲೀಸಾಗಿ ತೆರಳಬಹುದು. ಯಾರ ಪ್ರವೇಶಕ್ಕೂ ನಿರ್ಬಂಧ ಇಲ್ಲ. ಆಗುವ ಅನಾಹುತಗಳಿಗೂ ತಡೆಯಿಲ್ಲ. ಕೆರೆಯ ಒಂದು ಭಾಗಕ್ಕೆ ಭಟ್ಟರಹಳ್ಳಿ ಗ್ರಾಮ ಹೊಂದಿಕೊಂಡಿದೆ. ಕೆರೆಯ ಆವರಣದಲ್ಲೇ ಹತ್ತಾರು ಮನೆಗಳು ತಲೆ ಎತ್ತಿವೆ. ಮಕ್ಕಳು, ವಯೋವೃದ್ದರು ನಿತ್ಯ ಓಡಾಡುತ್ತಾರೆ. ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಸ್ಥಳಾಂತರಿಸುವ ಹಾಗೂ ಅವರಿಗೆ ಬೇರೆಡೆ ಸೂರು ಕಲ್ಪಿಸುವ ಕೆಲಸವಾಗಿಲ್ಲ. ಒತ್ತುವರಿದಾರರು ಖಾಲಿ ಮಾಡಿಲ್ಲ ಅನ್ನೋ ನೆಪವನ್ನು ಹೇಳಿಕೊಂಡು ತಂತಿಬೇಲಿ ನಿರ್ಮಿಸದೆ ಅಧಿಕಾರಿಗಳು ದಿನದೂಡುತ್ತಿದ್ದಾರೆ.


ಶತಶತಮಾನಗಳಿಂದಲೂ ಜನರ ಜೀವನಾಡಿಗಳಾಗಿರುವ ಕೆರೆಗಳು ನಗರೀಕರಣದಿಂದ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿಲ್ಲ. ಮಳೆ ಬಂದಾಗ ತುಂಬಿ ತುಳುಕುವ ಕೆರೆಗಳಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಅದರಿಂದ ಲಾಭವಾಗುವುದು ಎಷ್ಟು ನಿಜವೋ, ತುಂಬಿರುವ ಕೆರೆಗಳಿಂದ ಅಮಾಯಕರ ಜೀವಗಳು ಬಲಿಯಾಗುತ್ತಿರುವುದು ಕೂಡ ಅಷ್ಟೇ ನಿಜ. ಕೆರೆಗಳಲ್ಲಿ ನೀರು ತುಂಬಿರುವಷ್ಟು ದಿನ ಜನ ಬಹಳ ಜಾಗರೂಕತೆಯಿಂದ ಇರಬೇಕು ಎಚ್ಚರ ತಪ್ಪಿದರೆ ಅನಾಹುತ ಗ್ಯಾರಂಟಿ.

ಗಿಡಗಂಟೆ ಕೀಳಲಷ್ಟೇ ಸೀಮಿತ!
ಹತ್ತಾರು ಎಕರೆಗಳಿರುವ ಕೆರೆಗಳಿಗೆ ಕನಿಷ್ಟ ತಂತಿಬೇಲಿ ಅಳವಡಿಕೆ ಮಾಡದಿರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃ. ಅಭಿವೃದ್ದಿ ಹೆಸರಲ್ಲಿ ಅನುದಾನ ತಂದು ಹೂಳೆತ್ತುವ, ಕೆರೆಯ ಒಳಗೆ ಬೆಳೆದಿರುವ ಗಿಡಗಂಟೆ, ನೀರು ಸೊಪ್ಪುಗಳನ್ನು ಕೀಳುವ ಕೆಲಸಕ್ಕಷ್ಟೇ ಸೀಮಿತವಾಗಿದೆ. ಆದರೆ, ನಿಜವಾಗಲೂ ಆಗಬೇಕಾದ ಕೆಲಸಗಳು ಆಗುತ್ತಿಲ್ಲ. ಕೆರೆಗಳಿಗೆ ಕನಿಷ್ಠ ಭದ್ರತೆ ಒದಗಿಸದೆ ಹೋಗುತ್ತಿರುವ ಜನರ ಜೀವಗಳಿಗೆ ಹೊಣೆ ಯಾರು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಬಹುತೇಕ ಕೆರೆಗಳ ಸ್ಥಿತಿ ಇದೇ
ಕೇವಲ ಒಂದೆರಡು ಕೆರೆಗಳ ಅವ್ಯವಸ್ಥೆ ಅಲ್ಲ. ಕೆ.ಆರ್ ಪುರ ಸುತ್ತಮುತ್ತಲಿನಲ್ಲಿರುವ ಬಹುತೇಕ ಕೆರೆಗಳ ಅವ್ಯವಸ್ಥೆ ಇದೇ ರೀತಿ ಇದೆ. ಕೆರೆಗಳ ಅಭಿವೃದ್ದಿ ನಮ್ಮ ಗುರಿ ಎಂಬುದು ಕೇವಲ ಮಾತಿಗೆ ಸೀಮೀತವಾಗಿದೆ. ಅನುದಾನಗಳು ತಂದು ಅಭಿವೃದ್ದಿಯ ಹೆಸರಲ್ಲಿ ಸರ್ಕಾರದ ಖಜಾನೆ ಖಾಲಿಯಾಗುತ್ತಿದಿಯೇ ವಿನಃ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಯಾಗುತ್ತಿಲ್ಲ. ತುಂಬಿರುವ ಕೆರೆಗಳಿಗೆ ತಂತಿಬೇಲಿ ಅಳವಡಿಸಿ ಮೊದಲು ಜನರ ಜೀವಗಳನ್ನು ರಕ್ಷಣೆ ಮಾಡಲಿ ಎಂಬುದು ಸಾರ್ವಜನಿಕರ ಒತ್ತಾಯ.

33 ವರ್ಷದ ಮಹಿಳೆ ಸಾವು
ಕಲಬುರ್ಗಿ ಮೂಲದ 33 ವರ್ಷದ ಮಲ್ಲಮ್ಮನ ಶವ ಭಟ್ಟರಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ಎರಡು ವರ್ಷಗ ಹಿಂದೆ ಗಂಡ ತೀರಿಹೋದ ಮೇಲೆ ಮಲ್ಲಮ್ಮ ಮಕ್ಕಳೊಂದಿಗೆ ಸಹೋದರನ ಒಟ್ಟಿಗೆ ಕೂಲಿ ಮಾಡಿಕೊಂಡು ಆನಂದಪುರ ಸರ್ಕಲ್ ಬಳಿಯ ಶೆಡ್‌ನಲ್ಲಿ ವಾಸವಿದ್ದರು. ಬೆಳಗ್ಗೆ ಸಾರ್ವಜನಿಕರು ವಾಯುವಿಹಾರಕ್ಕೆ ಬಂದಾಗ ಕೆರೆಯಲ್ಲಿ ತೇಲುತ್ತಿದ್ದ ಮೃತ ದೇಹವನ್ನು ಕಂಡು ಕೆ.ಆರ್.ಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ.

Leave a Reply

Your email address will not be published.

Back to top button