ಸಿನಿಮಾ

ಉತ್ತರ ಕನ್ನಡ: ನಟ ಪುನೀತ್​ ರಾಜಕುಮಾರ್ ಪ್ರತಿಮೆ ಸಿದ್ಧಪಡಿಸಿದ ಪ್ರಾಧ್ಯಾಪಕ

ಕಾರವಾರ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾಗಿ ವಾರ ಕಳೆಯುತ್ತಿದ್ದರೂ ಇನ್ನೂ ಕೂಡ ಅವರ ಅಭಿಮಾನಿಗಳಿಗೆ ಈ ಕಹಿ ಘಟನೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಕಾರವಾರದ ಪ್ರಾಧ್ಯಾಪಕರೊಬ್ಬರು ಪುನೀತ್ ಅವರ ಮಣ್ಣಿನ ಪ್ರತಿಮೆಯೊಂದನ್ನು ತಯಾರಿಸುವ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕಾರವಾರ ತಾಲೂಕಿನ ಮಾಜಾಳಿಯ ಗಿರಿಜಾಬಾಯಿ ಸೈಲ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಭಿನಂದನ್ ಬಾಂದೇಕರ್ ಅವರು ಪುನೀತ್ ಅವರ ಎರಡು ಅಡಿ ಎತ್ತರದ ಮಣ್ಣಿನ ಪ್ರತಿಮೆ ತಯಾರಿಸುವ ಮೂಲಕ ನೆಚ್ಚಿನ ನಟನನ್ನು ನೆನೆದಿದ್ದಾರೆ.

ಅಭಿನಂದನ್ ಅವರದ್ದು ಕಲಾವಿದರ ಕುಟುಂಬ.ಕಳೆದ ಹತ್ತು – ಹದಿನೈದು ವರ್ಷಗಳಿಂದ ಅಭಿನಂದನ್ ಅವರ ತಂದೆ ಕಾಜುಬಾಗದ ಸಾರ್ವಜನಿಕ ಗಣಪತಿಯನ್ನು ಮಾಡಿಕೊಡುತ್ತಿದ್ದು, ಅಭಿನಂದನ್ ಕೂಡ ತಂದೆಗೆ ಸಹಾಯ ಮಾಡುತ್ತಾರೆ. ವರ್ಷದ ಹಿಂದೆ ಮೃತಪಟ್ಟಿದ್ದ ಸುಶಾಂತ್ ಸಿಂಗ್ ರಜಪೂತ್ ಅವರ ಮಣ್ಣಿನ ಮೂರ್ತಿಯನ್ನೂ ಅಭಿನಂದನ್ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಇದೀಗ ಅಪ್ಪು ಅವರ ಮಣ್ಣಿನ ಮೂರ್ತಿಯನ್ನು ಮೂರು ದಿನಗಳಲ್ಲಿ ನಿರ್ಮಿಸಿ, ಪುನೀತ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಮೆ ನಿರ್ಮಾಣದ ವಿಡಿಯೋ ಹಂಚಿಕೊಂಡಿರುವ ಅವರಿಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ಜೊತೆಗೆ ಈಗಾಗಲೇ ಚಿತ್ರದುರ್ಗ ಹಾಗೂ ಬೆಂಗಳೂರಿನಿಂದ ತಮಗೂ ಮೂರ್ತಿ ಸಿದ್ಧಪಡಿಸಿಕೊಡುವಂತೆ ಆರ್ಡರ್ ಕೂಡ ಬಂದಿದೆಯಂತೆ.

ಈ ಬಗ್ಗೆ ಮಾತನಾಡಿದ ಅಭಿನಂದನ್ ನಮ್ಮದು ಕೊಂಕಣಿ ಭಾಷಿಗರ ಕುಟುಂಬವಾದರೂ ನಾವು ಕನ್ನಡದ ಅಭಿಮಾನಿಗಳು. ಪುನೀತ್ ರಾಜಕುಮಾರರ ಬಗ್ಗೆ ಅವರು ಬದುಕಿದ್ದಾಗ ಕೇಳಿದ್ದಕ್ಕಿಂತ ಹೆಚ್ಚು ಅವರ ನಿಧನ‌ದ ನಂತರ ತಿಳಿಯಲ್ಪಟ್ಟೆವು. ಅವರ ಸಾಮಾಜಿಕ ಕಾರ್ಯಗಳಿಗೆ ಇಡೀ ಭಾರತವೇ ತಲೆಬಾಗಿದೆ. ಹೀಗಾಗಿ ಅಂಥ ಅಗಲಿದ ಮಹಾಚೇತನಕ್ಕೆ ನನ್ನ ಕೈಲಾದಷ್ಟು ಸೇವೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದೇನೆ ಎಂದರು.

Related Articles

Leave a Reply

Your email address will not be published.

Back to top button