ಯುಪಿ ಚುನಾವಣೆ: ಜಾತಿಬಲದ ವಿರುದ್ಧ ಕಾಂಗ್ರೆಸ್ ಅಸ್ತ್ರ; ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್
ಲಕ್ನೋ: ಉತ್ತರ ಪ್ರದೇಶದಲ್ಲಿ ಜಾತಿಬಲದ ವಿರುದ್ಧ ಮಹಿಳಾ ಕಾರ್ಡ್ ಬಳಸಲು ತಂತ್ರ ರೂಪಿಸಿರುವ ಕಾಂಗ್ರೆಸ್, ಶೇ. 40ರಷ್ಟು ಟಿಕೆಟ್ಗಳನ್ನು ಮಹಿಳೆಯರಿಗೆ ನೀಡಲು ನಿರ್ಧರಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ್ದು, ಮಹಿಳೆಯರು ಮುಂದೆ ಬರುವ ಅಗತ್ಯವಿದೆ ಮತ್ತು ಅವರು ಬದಲಾವಣೆಯನ್ನು ತರಬಲ್ಲರು ಎಂದಿದ್ದಾರೆ.
ಉತ್ತರ ಪ್ರದೇಶದ ಹೆಣ್ಣುಮಕ್ಕಳಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬದಲಾವಣೆ ಬಯಸುವ ಮಹಿಳೆಯರಿಗಾಗಿ ಈ ತೀರ್ಮಾನ ಎಂದು, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ನ್ನು ಗೆಲ್ಲಿಸುವ ಹೊಣೆ ಹೊತ್ತಿರುವ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದೇ ಜಾತಿ. ಚುನಾವಣೆಯಲ್ಲಿ ಬ್ರಾಹ್ಮಣರನ್ನು ಮುಂದಿಟ್ಟುಕೊಂಡು ಗೆಲ್ಲಲು ಒಂದೆಡೆ ಬಿಜೆಪಿ ತಂತ್ರ ರೂಪಿಸುತ್ತಿರುವಾಗ ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚು ಅವಕಾಶ ಕೊಡುವ ತೀರ್ಮಾನ ಪ್ರಕಟಿಸಿರುವುದು ಕುತೂಹಲ ತಂದಿದೆ.
ಲಖೀಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆ ಪ್ರಕರಣದಲ್ಲಿ ಕೇಂದ್ರ ಮಂತ್ರಿ ಅಜಯ್ ಮಿಶ್ರಾ ಪುತ್ರ ಪ್ರಮುಖ ಆರೋಪಿಯಾಗಿರುವುದು ಚುನಾವಣೆಯಲ್ಲಿ ಪ್ರತಿಪಕ್ಷಗಳ ಪಾಲಿಗೆ ಪ್ರಮುಖ ಅಸ್ತ್ರವಾಗಿ ಒದಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿವೆ.
ಇದರ ನಡುವೆಯೇ, ಕಾಂಗ್ರೆಸ್ ಪ್ರಕಟಿಸಿರುವ ಹೊಸ ತೀರ್ಮಾನ ಸಂಚಲನ ಮೂಡಿಸಲಿದೆ.