ನವೆಂಬರ್ 26ರವರೆಗೂ ಸರ್ಕಾರಕ್ಕೆ ಸಮಯವಿದೆ; ರೈತರ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ಕೊಟ್ಟ ಟಿಕಾಯತ್
ನವದೆಹಲಿ: ನವೆಂಬರ್ 26ರೊಳಗೆ ಸರ್ಕಾರವು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ದೆಹಲಿ ಗಡಿಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಆರಂಭವಾಗಿ ವರ್ಷವೇ ಸಮಿಪಿಸುತ್ತಿರುವ ಹೊತ್ತ್ಲಿನಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ಈ ಹೊಸ ಎಚ್ಚರಿಕೆ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರಕ್ಕೆ ನವೆಂಬರ್ 26ರವರೆಗೆ ಸಮಯವಿದೆ. ನವೆಂಬರ್ 27ರಿಂದ ರೈತರು ಹಳ್ಳಿಗಳಿಂದ ಟ್ರ್ಯಾಕ್ಟರ್ಗಳ ಮೂಲಕ ದೆಹಲಿಯ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳಲ್ಲಿ ಗಡಿಯನ್ನು ತಲುಪುತ್ತಾರೆ. ಪ್ರತಿಭಟನಾ ಸ್ಥಳದಲ್ಲಿ ರೈತರ ಭದ್ರ ಕೋಟೆಯೇಳಲಿದೆ ಎಂದು ಟಿಕಾಯತ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಇದು ಅವರು ಕಳೆದೆರಡು ದಿನಗಳಲ್ಲಿ ಕೇಂದ್ರಕ್ಕೆ ನೀಡುತ್ತಿರುವ ಎರಡನೇ ಎಚ್ಚರಿಕೆಯಾಗಿದೆ. ಭಾನುವಾರ ಅವರು, ದೆಹಲಿ ಗಡಿಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ತೆಗೆದುಹಾಕಲು ಪ್ರಯತ್ನಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ರೈತರನ್ನು ಗಡಿಯಿಂದ ಬಲವಂತವಾಗಿ ಹೊರಹಾಕುವ ಪ್ರಯತ್ನ ನಡೆದರೆ, ದೇಶಾದ್ಯಂತ ಇರುವ ಸರ್ಕಾರಿ ಕಚೇರಿಗಳನ್ನು ರೈತರು ಗಲ್ಲಾ ಮಂಡಿ (ಧಾನ್ಯ ಮಾರುಕಟ್ಟೆ)ಯನ್ನಾಗಿ ಪರಿವರ್ತಿಸಲಿದ್ದಾರೆ. ಆಡಳಿತವು ಪ್ರತಿಭಟನಾ ಸ್ಥಳದಲ್ಲಿ ತನ್ನ ಡೇರೆಗಳನ್ನು ಹಾಕಲು ಪ್ರಯತ್ನಿಸಿದರೆ, ರೈತರು ಅವುಗಳನ್ನು ಪೊಲೀಸ್ ಠಾಣೆಗಳು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಕಲಿದ್ದಾರೆ ಎಂದು ಟಿಕಾಯತ್ ಹೇಳಿದ್ದರು.
ಕಳೆದ ವರ್ಷದ ನವೆಂಬರ್ 26ರಿಂದ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಾವಿರಾರು ರೈತರು ಮೂರು ಗಡಿ ಸ್ಥಳಗಳಾದ ಟಿಕ್ರಿ, ಸಿಂಘು ಮತ್ತು ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಈ ಕಾನೂನುಗಳು ರೈತರ ಪರ ಎನ್ನುತ್ತಲೇ ಇದೆ. ಕೇಂದ್ರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಅತಂತ್ರ ಸ್ಥಿತಿಯೇ ಮುಂದುವರಿದಿದೆ.