Breaking NewsLatest

ಮನೆಗೆ ಮರಳಿದ ‘ಮಹಾರಾಜ’; ಟಾಟಾ ಸನ್ಸ್ ತೆಕ್ಕೆಗೆ ಏರ್ ಇಂಡಿಯಾ?

ನವದೆಹಲಿ: ಏರ್ ಇಂಡಿಯಾ ಮತ್ತೆ ಟಾಟಾ ಉದ್ಯಮ ಸಾಮ್ರಾಜ್ಯದ ಪಾಲಾಗಿದೆ. ಈ ಸಂಬಂಧ ಅದು ಅಂತಿಮ ಬಿಡ್​ನ್ನು ಗೆದ್ದಿದೆ ಎಂದು ವರದಿಯಾಗಿದೆ.

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಒಡೆತನ ಪಡೆಯಲು ಸೆಪ್ಟೆಂಬರ್ 15ರಂದು ಟಾಟಾ ಸಂಸ್ಥೆ ಬಿಡ್ ಸಲ್ಲಿಸಿತ್ತು. ಸ್ಪೈಸ್ ಜೆಟ್ ಕೂಡ ಪೈಪೋಟಿಯೊಡ್ಡಿತ್ತು. ಆದರೆ ಅಂತಿಮವಾಗಿ ಏರ್ ಇಂಡಿಯಾ ಈಗ ಟಾಟಾ ಸನ್ಸ್ ಸ್ವಾಧೀನಕ್ಕೆ ಬಂದಿದೆ ಎನ್ನಲಾಗಿದೆ.

ಏರ್​ಲೈನ್​ ಸ್ವಾಧೀನಕ್ಕಾಗಿ ಸರ್ಕಾರ ಕನಿಷ್ಠ ಮೀಸಲು ಬೆಲೆಯನ್ನು ಅಂತಿಮಗೊಳಿಸಿದ ಬೆನ್ನಲ್ಲೇ, ಟಾಟಾ ಸಂಸ್ಥೆ ಪಾಲಿನ ಈ ಭಾವುಕ ಬೆಳವಣಿಗೆ ಆಗಿದೆ.

ಭವಿಷ್ಯದ ನಗದು ಹರಿವಿನ ಚಿತ್ರಣ, ಬ್ರಾಂಡ್ ಮೌಲ್ಯ ಮತ್ತು ವಿದೇಶಿ ವಿಮಾನ ನಿಲ್ದಾಣಗಳಲ್ಲಿನ ಸ್ಲಾಟ್‌ಗಳ ಆಧಾರದ ಮೇಲೆ ಸರ್ಕಾರ ಅಂತಿಮಗೊಳಿಸಿದ್ದ ಕನಿಷ್ಠ ಮೀಸಲು ಬೆಲೆಗಿಂತ 3 ಸಾವಿರ ಕೋಟಿ ಹೆಚ್ಚು ಮೌಲ್ಯವನ್ನು ಟಾಟಾ ಸನ್ಸ್ ಸಲ್ಲಿಸಿದ ಬಿಡ್ ಹೊಂದಿತ್ತೆನ್ನಲಾಗಿದೆ.

ಏರ್ ಇಂಡಿಯಾ ಸ್ವಾಧೀನಪಡಿಸಿಕೊಳ್ಳುವ ಬಿಡ್ ಗೆಲ್ಲುವ ಮೂಲಕ ಟಾಟಾ ಸಂಸ್ಥೆ 1932ರಲ್ಲಿ ತಾನು ಕಟ್ಟಿದ್ದ ಏರ್​ಲೈನ್​ನ್ನು ಮತ್ತೆ ತನ್ನ ತೆಕ್ಕೆಗೇ ಪಡೆದಂತಾಗಲಿದೆ.

ಜೆಆರ್​ಡಿ ಟಾಟಾ ಅವರು 1932ರಲ್ಲಿ ಸ್ಥಾಪಿಸಿದ್ದ ಟಾಟಾ ಏರ್​ಲೈನ್, ಸ್ವಾತಂತ್ರ್ಯಾನಂತರ 1948ರಲ್ಲಿ ಭಾಗಶಃ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿತು. 1953ರಲ್ಲಿ ರಾಷ್ಟ್ರೀಕರಣಗೊಂಡಿತು. 1962ರಲ್ಲಿ ಏರ್ ಇಂಡಿಯಾ ಎಂದು ನಾಮಕರಣವಾಯಿತು. 1977ರವರೆಗೂ ಜೆಆರ್​ಡಿ ಟಾಟಾ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದರು.

ಏರ್ ಇಂಡಿಯಾವನ್ನು ಮತ್ತೆ ಖಾಸಗೀಕರಣಗೊಳಿಸುವ ಪ್ರಸ್ತಾಪಕ್ಕೆ 2017ರ ಜೂನ್ 28ರಂದು ಸರ್ಕಾರದ ಅಂಗೀಕಾರ ದೊರೆತ ಬಳಿಕ ಖಾಸಗೀಕರಣ ಪ್ರಕ್ರಿಯೆ ಆರಂಭಿಸಲು ಸಮಿತಿಯೊಂದರ ರಚನೆಯಾಯಿತು. ಶೇ.76ರಷ್ಟು ಷೇರು ಮಾರಾಟ ಪ್ರಸ್ತಾಪ 2018ರಲ್ಲಿ ಇತ್ತಾದರೂ, 2019ರ ಕೊನೆಯ ವೇಳೆಗೆ ಪೂರ್ಣ ಪ್ರಮಾಣದ ಷೇರು ಮಾರಾಟದ ನಿರ್ಧಾರಕ್ಕೆ ಸರ್ಕಾರ ಬಂತು. 2020ರ ಜನವರಿಯಲ್ಲಿ ಬಿಡ್​ಗಳನ್ನು ಆಹ್ವಾನಿಸಲಾಗಿತ್ತು.

ಕಳೆದ ಎರಡು ವರ್ಷಗಳಲ್ಲಿ ಏರ್ ಇಂಡಿಯಾ ಮೇಲೆ 40 ಸಾವಿರ ಕೋಟಿ ಸಾಲದ ಹೊರೆಯಿತ್ತು. ಹಲವು ಬಿಕ್ಕಟ್ಟುಗಳನ್ನು ಎದಿರಿಸಿದ ಬಳಿಕ ಅಂತಿಮವಾಗಿ ಏರ್ ಇಂಡಿಯಾ ಮಹಾರಾಜ ಮತ್ತೆ ಖಾಸಗಿ ತೆಕ್ಕೆಗೆ ಹೋಗುತ್ತಿದ್ದಾನೆ. ಟಾಟಾ ಸನ್ಸ್ ಪಾಲಿಗೆ ಇದು ಅತ್ಯಂತ ಭಾವುಕ ಘಳಿಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button