Breaking NewsLatest

ಪೆಗಾಸಸ್ ಕೇಸ್: ಕೇಂದ್ರದ ಅಸ್ಪಷ್ಟ ನಿರಾಕರಣೆಗೆ ಸುಪ್ರೀಂ ಅತೃಪ್ತಿ; ಸ್ವತಂತ್ರ ತನಿಖೆಗೆ ತಜ್ಞರ ಸಮಿತಿ

ನವದೆಹಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ಆಗಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತಂತೆ ಸುಪ್ರೀಂ ಕೋರ್ಟ್ ತನ್ನ ಆದೇಶ ಪ್ರಕಟಿಸಿದೆ.

ಸಿಜೆಐ ಎನ್​ವಿ ರಮಣ ನೇತೃತ್ವದ ಪೀಠ, ಪೆಗಾಸಸ್ ಗೂಢಚರ್ಯೆ ವಿರುದ್ಧದ ಅರ್ಜಿಗಳ ವಿಚಾರದಲ್ಲಿ ಬುಧವಾರ ಕೇಂದ್ರ ಸರ್ಕಾರದ ಅಸ್ಪಷ್ಟ ನಿರಾಕರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸ್ವತಂತ್ರ ತನಿಖೆಗೆ ಆದೇಶ ಹೊರಡಿಸಿದೆ.

ಪದೇ ಪದೇ ಅವಕಾಶ ನೀಡಿದರೂ ಕೇಂದ್ರ ಸ್ಪಷ್ಟತೆ ನೀಡದ ಸೀಮಿತ ಅಫಿಡವಿಟ್ ಸಲ್ಲಿಸಿದುದರ ಬಗ್ಗೆ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಈ ಸಂಬಂಧ ಸ್ಪಷ್ಟನೆ ಕೊಟ್ಟಿದ್ದರೆ ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಅಗುತ್ತಿತ್ತು ಎಂದು ಪೀಠ ಹೇಳಿದೆ. ಪ್ರತಿ ಬಾರಿಯೂ ರಾಷ್ಟ್ರೀಯ ಭದ್ರತೆಯ ವಿಚಾರವೆತ್ತಿ ಸ್ಪಷ್ಟನೆ ಕೊಡುವುದರಿಂದ ತಪ್ಪಿಸಿಕೊಂಡುದರ ಬಗ್ಗೆಯೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಂದು ಇದು ನ್ಯಾಯಾಲಯವನ್ನು ಮೂಕಪ್ರೇಕ್ಷಕವಾಗಿರಿಸಲು ಸಾಧ್ಯವಿಲ್ಲ ಎಂದ ಪೀಠ, ಸರ್ಕಾರದ ಅಸ್ಪಷ್ಟ ನಿರಾಕರಣೆ ಸಮಾಧಾನಕರವಲ್ಲ ಎಂದು ಹೇಳಿದೆ.

ಪೆಗಾಸಸ್ ಗೂಢಚರ್ಯೆ ವಿಚಾರದಲ್ಲಿನ ಆರೋಪಗಳ ಬಗ್ಗೆ ತನಿಖೆಯಾಗಬೇಕಾದ ಅಗತ್ಯವಿದೆ ಎಂದು ಸುಪ್ರೀ ಕೋರ್ಟ್ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತಜ್ಞರ ಸಮಿತಿಯನ್ನು ನೇಮಿಸುವುದಾಗಿ ಕೋರ್ಟ್ ಪ್ರಕಟಿಸಿದೆ.

ಪೆಗಾಸಸ್ ವಿಚಾರದಲ್ಲಿರುವ ಆರೋಪಗಳ ಸ್ವರೂಪ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿವೆ. ಸರ್ಕಾರಕ್ಕೆ ನೊಟೀಸ್ ನೀಡಲಾಗಿತ್ತು. ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡಲು ಸಾಕಷ್ಟು ಅವಕಾಶಗಳನ್ನೂ ಕೊಡಲಾಗಿತ್ತು. ಖಾಸಗಿತನ ಪತ್ರಕರ್ತರು ಮತ್ತು ರಾಜಕಾರಣಿಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಇರುತ್ತದೆ. ತಂತ್ರಜ್ಞಾನವನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬ ಬಗ್ಗೆ ಈಗ ಸಲ್ಲಿಕೆಯಾಗಿರುವ ಅರ್ಜಿಗಳು ಕಳವಳ ವ್ಯಕ್ತಪಡಿಸಿವೆ. ಖಾಸಗಿತನದ ಹಕ್ಕಿನ ಬಗ್ಗೆ ಚರ್ಚೆಯಾಗಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹಿಂದಿನ ವಿಚಾರಣೆಯಲ್ಲಿಯೂ ಸುಪ್ರೀಂ ಕೋರ್ಟ್ ತನಿಖೆಗೆ ತಜ್ಞರ ಸಮಿತಿ ನೇಮಿಸುವ ಇರಾದೆಯನ್ನು ವ್ಯಕ್ತಪಡಿಸಿತ್ತು. ಸೆ. 13ರ ವಿಚಾರಣೆಯಲ್ಲಿ, ಎರಡು ಮೂರು ದಿನಗಳೊಳಗೆ ಮಧ್ಯಂತರ ಆದೇಶ ಹೊರಡಿಸುವುದಾಗಿ ನ್ಯಾಯಾಲಯ ಹೇಳಿತ್ತು. ಬಳಿಕ, ತಜ್ಞರ ಸಮಿತಿಯಲ್ಲಿರಬೇಕೆಂದು ತಾನು ಬಯಸಿದ ಕೆಲವರು ಸಮಿತಿಯಲ್ಲಿ ಸೇರಲು ವೈಯಕ್ತಿಕ ಕಾರಣಕ್ಕೆ ಒಪ್ಪುತ್ತಿಲ್ಲವಾದ್ದರಿಂದ ಆದೇಶ ಹೊರಡಿಉವುದು ತಡವಾಗುತ್ತಿದೆ ಎಂದು ಸೆ.23ರಂದು ನ್ಯಾಯಾಲಯ ಹೇಳಿತ್ತು.

Related Articles

Leave a Reply

Your email address will not be published. Required fields are marked *

Back to top button