ಮುಲ್ಲಪೆರಿಯಾರ್ ಡ್ಯಾಂ ನೀರಿನ ಮಟ್ಟ; ಸಹಕಾರ ಕೊರತೆ ಬಗ್ಗೆ ಕೇರಳ, ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಛೀಮಾರಿ
ನವದೆಹಲಿ: ಕೇರಳದ ಬಹಳಷ್ಟು ಕಡೆ ಭಾರೀ ಮಳೆ ಮತ್ತು ಪ್ರವಾಹ 20 ಮಂದಿಯನ್ನು ಬಲಿ ತೆಗೆದುಕೊಂಡ ಬಳಿಕವೂ ಮುಲ್ಲಪೆರಿಯಾರ್ ಅಣೆಕಟ್ಟು ವಿಚಾರದಲ್ಲಿ ಪರಸ್ಪರ ಸಹಕಾರ ಕೊರತೆಯ ಕುರಿತಂತೆ ಕೇರಳ ತಮಿಳ್ನಾಡು ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಇದು ಜನರ ಜೀವದ ಪ್ರಶ್ನೆ ಎಂದಿದೆ.
ಎರಡೂ ರಾಜ್ಯಗಳ ನಡುವೆ ಅನೇಕ ವರ್ಷಗಳಿಂದ ವಿವಾದಕ್ಕೆ ಕಾರಣವಾಗಿರುವ ಮುಲ್ಲಪೆರಿಯಾರ್ ಡ್ಯಾಂ ನೀರಿನ ಮಟ್ಟದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರಿಂ ಕೋರ್ಟ್ ಎರಡೂ ರಾಜ್ಯ ಸರ್ಕಾರಗಳಿಗೆ ಛೀಮಾರಿ ಹಾಕಿದೆ.
ನೀರಿನ ಮಟ್ಟದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇದೊಂದು ಅತ್ಯಂತ ಗಂಭೀರ ವಿಚಾರ. ಇದು ಜನರ ಮತ್ತು ಪ್ರಾಣ ಮತ್ತು ಆಸ್ತಿಯ ಪ್ರಶ್ನೆ ಎಂದು ಕೋರ್ಟ್ ಹೇಳಿದೆ.
ಮುಲ್ಲಪೆರಿಯಾರ್ ಡ್ಯಾಂ ಕೇರಳ ವ್ಯಾಪ್ತಿಯಲ್ಲಿದ್ದು, ತಮಿಳ್ನಾಡು ಸರ್ಕಾರ ಇದನ್ನು ನಿರ್ವಹಿಸುವುದು ಗೊಂದಲಗಳಿಗೆ ಎಡೆ ಮಾಡಿರುವ ವಾಸ್ತವವಾಗಿದೆ.
ಎರಡೂ ಸರ್ಕಾರಗಳೇ ಇಲ್ಲಿನ ಸಮಸ್ಯೆ ಬಗೆಹರಿಸಿಕೊಳ್ಳಲು ಕ್ರಮ ಕೈಗೊಂಡರೆ ಇದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಗರಿಷ್ಠ ನೀರಿನ ಮಟ್ಟ ಎಷ್ಟಿರಬೇಕೆಂಬುದರ ಬಗ್ಗೆ ಮಾಹಿತಿ ಕೊಡಿ ಎಂದು ಕೋರ್ಟ್ ಸೂಚಿಸಿದೆ.
ಜಸ್ಟೀಸ್ ಎಎಂ ಖನಿವಾಲ್ಕರ್ ಮತ್ತು ಸಿಟಿ ರವಿಕುಮಾರ್ ಅವರಿದ್ದ ದ್ವಿಸದಸ್ಯ ಪೀಠ, ಕೇರಳದ ಆತಂಕವನ್ನು ಅರ್ಥಮಾಡಿಕೊಂಡು ತಕ್ಷಣ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೂ ನಿರ್ದೇಶನ ನೀಡಿದೆ.