ಲಖೀಂಪುರ ಹತ್ಯೆ: ಮತ್ತೊಮ್ಮೆ ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ; ಇನ್ನಷ್ಟು ಸಾಕ್ಷಿ ಕಲೆಹಾಕಲು ಆದೇಶ
ನವದೆಹಲಿ: ಲಖೀಂಪುರ ಕೇರಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಉತ್ತರ ಪ್ರದೇಶ ಸರ್ಕಾರದ ಬೆವರಿಳಿಯುವಂತೆ ಮಾಡಿದೆ. ರೈತರ ಹತ್ಯೆ ಪ್ರಕರಣಕ್ಕೆ ಇರುವುದು ಬರೀ 23 ಪ್ರತ್ಯಕ್ಷ ಸಾಕ್ಷಿಗಳೇ? ಏಕೆ ಹಾಗೆ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಇನ್ನೂ ಹೆಚ್ಚು ಸಾಕ್ಷಿಗಳನ್ನು ಕಲೆಹಾಕಿ ಮತ್ತು ಅವರಿಗೆ ರಕ್ಷಣೆ ಒದಗಿಸಿ ಎಂದು ಆದೇಶಿಸಿದೆ.
ಇನ್ನಷ್ಟು ಸಾಕ್ಷಿಗಳ ಹೇಳಿಕೆ ದಾಖಲಿಸಲು ತನ್ನ ಆದೇಶದಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಹೇಳಿಕೆಗಳನ್ನು ದಾಖಲಿಸುವಲ್ಲಿ ಯಾವುದೇ ತೊಂದರೆ ಮತ್ತು ನ್ಯಾಯಾಂಗ ಅಧಿಕಾರಿಗಳ ಅಲಭ್ಯತೆ ಇದ್ದರೆ, ಹತ್ತಿರದ ಜಿಲ್ಲಾ ನ್ಯಾಯಾಧೀಶರು ಪರ್ಯಾಯದ ಲಭ್ಯತೆ ಖಚಿತಪಡಿಸಿಕೊಳ್ಳಬೇಕೆಂದು ಹೇಳಿದೆ.
ಕಳೆದ ವಾರ ನಡೆದ ವಿಚಾರಣೆಯಲ್ಲಿ, ಯುಪಿ ಸರ್ಕಾರದ ನಿಧಾನ ಗತಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು, ಪ್ರಕರಣದಲ್ಲಿ ನೀವು ಉದ್ದೇಶಪೂರ್ವಕವಾಗಿ ವಿಳಂಬ ತೋರುತ್ತಿದ್ದೀರಿ ಎಂಬ ಭಾವನೆ ಬರದಂತಾಗಲು ಕ್ರಮ ವಹಿಸಿ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು.
ಹೆಚ್ಚಿನ ಸಾಕ್ಷಿಗಳನ್ನು ಏಕೆ ಪ್ರಶ್ನಿಸಿಲ್ಲ ಎಂದು ಸರ್ಕಾರವನ್ನು ನ್ಯಾಯಾಧೀಶರು ಕೇಳಿದ್ದರು. 44 ಸಾಕ್ಷಿಗಳ ಪೈಕಿ ಈವರೆಗೆ ನಾಲ್ವರು ಸಾಕ್ಷಿಗಳ ಹೇಳಿಕೆಯನ್ನು ಮಾತ್ರ ದಾಖಲಿಸಿರುವಿರಿ, ಉಳಿದವರ ಹೇಳಿಕೆ ಯಾಕೆ ದಾಖಲಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಪ್ರಶ್ನಿಸಿದ್ದರು.
ಎಲ್ಲಾ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲು ಮತ್ತು ರಕ್ಷಣೆ ನೀಡಲು ಆದೇಶ ನೀಡಿದ್ದ ನ್ಯಾಯಾಲಯ, ಇದು ಕೊನೆಯಿಲ್ಲದ ಕಥೆಯಾಗಬಾರದು ಎಂದು ಹೇಳಿತ್ತು.
ಅ.3ರಂದು ನಡೆದ ರೈತರ ಹತ್ಯೆ ಪ್ರಕರಣದಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು ಬಂಧಿತನಾಗಿದ್ದಾನೆ. ಪ್ರತಿಭಟನಾ ನಿರತರ ಮೇಲೆ ಕಾರು ಹಾಯಿಸಿ ಕೊಂದ ಆರೋಪ ಆತನ ಮೇಲಿದೆ. ಪ್ರಕರಣದಲ್ಲಿ ಒಬ್ಬ ಪತ್ರಕರ್ತನೂ ಸೇರಿ ಇನ್ನೂ ನಾಲ್ವರು ಸಾವಿಗೀಡಾಗಿದ್ದು, ಅದರ ಬಗ್ಗೆ ಪ್ರತ್ಯೇಕ ವರದಿ ಸಲ್ಲಿಸುವಂತೆಯೂ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.