Breaking NewsLatest

ಸೆಂಟ್ರಲ್ ವಿಸ್ತಾಕ್ಕೆ ‘ಮನರಂಜನಾ ವಲಯ’ ಬಳಕೆ?; 3 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಸೆಂಟ್ರಲ್ ವಿಸ್ತಾ ಯೋಜನೆಯು ಸಾರ್ವಜನಿಕ ಮನರಂಜನಾ ವಲಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿರುವ ಅರ್ಜಿಗೆ ಮೂರು ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಸಂಸತ್ತು ಮತ್ತು ಉಪರಾಷ್ಟ್ರಪತಿ ನಿವಾಸವನ್ನು ಅಲ್ಲಿ ನಿರ್ಮಿಸಲಾಗುತ್ತಿರುವುದರಿಂದ ಮನರಂಜನಾ ಪ್ರದೇಶವನ್ನು ಹೊಂದಲು ಸಾಧ್ಯವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಮುಂದಿನ ಶುಕ್ರವಾರ ವಿಚಾರಣೆ ನಡೆಯಲಿದೆ.

ಸ್ವಾತಂಥ್ರ್ಯಕ್ಕೂ ಮೊದಲು ಬ್ರಿಟಿಷರು ವಿನ್ಯಾಸಗೊಳಿಸಿದ್ದ ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯನ್ನು ದೆಹಲಿಯ ಹೃದಯಭಾಗದಲ್ಲಿ 3.2 ಕಿಮೀ ವಿಸ್ತೀರ್ಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 20 ಸಾವಿರ ಕೋಟಿಯ ಯೋಜನೆ ಇದಾಗಿದೆ.

ಸಂಸತ್ ಭವನ ಮತ್ತು ಸಚಿವಾಲಯದ ಕಚೇರಿಗಳು ಸೇರಿದಂತೆ ಹಲವಾರು ಸರ್ಕಾರಿ ಕಟ್ಟಡಗಳನ್ನು ಯೋಜನೆಯ ಭಾಗವಾಗಿ ಪುನರ್ನಿರ್ಮಿಸಲಾಗುತ್ತಿದೆ.

ಈ ಮೊದಲು ಭೂಮಿ ಬಳಕೆಯಲ್ಲಿ ಕಾನೂನು ಬಾಹೀರ ಬದಲಾವಣೆ ಮತ್ತು ಪರಿಸರಕ್ಕೆ ಧಕ್ಕೆ ಅಂಶದೊಂದಿಗೆ ಈ ವಿಸ್ತಾ ಯೋಜನೆಯನ್ನು ಪ್ರಶ್ನಿಸಿದ್ದ ಸಾಮಾಜಿಕ ಕಾರ್ಯಕರ್ತ ರಾಜೀವ್ ಸೂರಿ, ಹೊಸ ಅರ್ಜಿಯಲ್ಲಿ ಮನರಂಜನಾ ವಲಯದ ಮೇಲೆ ಪರಿಣಾಮ ಬೀರಲಿದೆ ಎಂದು ಆಕ್ಷೇಪಿಸಿದ್ದಾರೆ.

ಅವರ ಈ ಹಿಂದಿನ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್​ಗಳೆರಡೂ ವಜಾಗೊಳಿಸಿದ್ದವು ಮತ್ತು ಯೋಜನೆ ಕಾಮಗಾರಿ ಮುಂದುವರಿದಿತ್ತು.

ಸೆಂಟ್ರಲ್ ವಿಸ್ತಾ ಯೋಜನೆಗಾಗಿ ಕೆಲವು ಪ್ರದೇಶಗಳಲ್ಲಿ ಭೂ ಬಳಕೆಯನ್ನು ಸಾರ್ವಜನಿಕ ಮನರಂಜನೆ ವ್ಯಾಪ್ತಿಯಿಂದ ವಸತಿಗೆ ಬದಲಾಯಿಸಲಾಗುತ್ತಿದೆ ಎಂದು ರಾಜೀವ್ ಸೂರಿ ತಮ್ಮ ಹೊಸ ಅರ್ಜಿಯಲ್ಲಿ ಹೇಳಿದ್ದಾರೆ. ಇದು ಪ್ರಸ್ತುತ ಸಾರ್ವಜನಿಕ ಮನರಂಜನೆಗಾಗಿ ಉದ್ದೇಶಿಸಿರುವ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದ್ದಾರೆ.

ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರು ಸಾಲಿಸಿಟರ್ ಜನರಲ್ ಅವರನ್ನು ಸರ್ಕಾರವು ಅಂತಹ ಪ್ರದೇಶವನ್ನು ಯೋಜನೆಯಿಂದ ತೆಗೆದುಹಾಕಿದೆಯೇ ಅಥವಾ ಹಿಂದಿನ ಮನರಂಜನಾ ಪ್ರದೇಶಗಳನ್ನು ಬೇರೆ ಕೆಲವು ಪ್ರದೇಶಗಳಿಗೆ ಸ್ಥಳಾಂತರಿಸಬೇಕೇ ಎಂದು ಕೇಳಿದರು. ತಿದ್ದುಪಡಿಯ ಹಿಂದಿನ ಕಾರಣಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿತು.

Related Articles

Leave a Reply

Your email address will not be published. Required fields are marked *

Back to top button