Breaking NewsLatest

ಎಷ್ಟು ಮಂದಿಯನ್ನು ಬಂಧಿಸಿದ್ದೀರಿ?; ಲಖೀಂಪುರ ಖೇರಿ ಘಟನೆ ಸಂಬಂಧ ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ನವದೆಹಲಿ: ಲಖೀಂಪುರ ಖೇರಿಯಲ್ಲಿ ಕಾರು ಹರಿಸಿ ರೈತರನ್ನು ಕೊಲ್ಲಲಾದ ಘಟನೆ ಸಂಬಂಧ ಎಷ್ಟು ಮಂದಿಯನ್ನು ಬಂಧಿಸಿದ್ದೀರಿ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಗುರುವಾರ ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಹಿಂಸಾಚಾರ ಸಂಬಂಧ ದಾಖಲಾಗಿರುವ ಎಫ್​ಐಆರ್ ಮತ್ತು ಬಂಧನ ಕುರಿತು ವಸ್ತುಸ್ಥಿತಿ ವರದಿಯನ್ನು ನಾಳೆಯೊಳಗಾಗಿ (ಶುಕ್ರವಾರ) ಸಲ್ಲಿಸುವಂತೆ ಸೂಚಿಸಿದೆ.

ಇಡೀ ಘಟನೆ ದುರದೃಷ್ಟಕರವಾದುದು ಎಂದು ಅಭಿಪ್ರಾಯಪಟ್ಟ ಸಿಜೆಐ ಎನ್​ವಿ ರಮಣ ನೇತೃತ್ವದ ಪೀಠ, ಇಡೀ ಘಟನೆಗೆ ಸಂಬಂಧಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ನಿರ್ದಿಷ್ಟ ವರದಿ ಮತ್ತು ಈ ಘಟನೆ ಸಂಬಂಧ ಅಲಹಾಬಾದ್ ಹೈಕೋರ್ಟ್​ನಲ್ಲಿ ಬಾಕಿಯಿರುವ ಅರ್ಜಿಗಳ ಬಗ್ಗೆಯೂ ವಿವರ ಸಲ್ಲಿಸುವಂತೆ ಹೆಚ್ಚುವರಿ ವಕೀಲರಿಗೆ ಸೂಚಿಸಿತು.

ಘಟನೆಯಲ್ಲಿ ರೈತರು ಮತ್ತು ಇತರರೂ ಕೊಲೆಯಾಗಿದ್ದಾರೆ. ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿರುವ ಆರೋಪಿಗಳು ಯಾರು ಮತ್ತು ಯಾರನ್ನು ಈ ಸಂಬಂಧ ಬಂಧಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುವುದಾಗಿ ನ್ಯಾಯಾಲಯ ಹೇಳಿತು.

ರೈತರ ಮೇಲೆ ಕಾರು ಹರಿಸಿ ಕೊಲ್ಲಲಾದ ಮತ್ತು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆರೋಪಿಯಾಗಿರುವ ಘಟನೆ ವಿಚಾರವಾಗಿ ಮಧ್ಯಪ್ರವೇಶಿಸುವಂತೆ ಕೋರಿ ನ್ಯಾಯವಾದಿ ಶಿವಕುಮಾರ್ ತ್ರಿಪಾಠಿ ಸಿಜೆಐ ಎನ್​ವಿ ರಮಣ ಅವರಿಗೆ ಪತ್ರ ಬರೆದಿದ್ದರು. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಲವು ರೈತರು ಸಾವಿಗೀಡಾಗಿದ್ದಾರೆ. ಇದು ಮಾನವ ಹಕ್ಕು ಉಲ್ಲಂಘನೆಯಾಗಿದೆ. ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯವನ್ನು ತ್ರಿಪಾಠಿ ವಿನಂತಿಸಿಕೊಂಡಿದ್ದರು. ಉತ್ತರ ಪ್ರದೇಶ ಸರ್ಕಾರ ಈ ಘಟನೆ ಸಂಬಂಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂದೂ ತ್ರಿಪಾಠಿ ಆರೋಪಿಸಿದ್ದರು. ರೈತರು ಹೆದರಿದ್ದಾರೆ ಮತ್ತು ನೊಂದಿದ್ದಾರೆ ಎಂದಿದ್ದ ಅವರು, ಎಫ್​ಐಆರ್​ಗಾಗಿ ಒತ್ತಾಯಿಸಿದ್ದರು.

ಎಫ್​ಐಆರ್ ದಾಖಲಿಸಲಾಗಿದೆ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ಆರೋಪಗಳ ಕುರಿತು ತನಿಖೆ ನಡೆಸಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಸರಿಯಾದ ಎಫ್​ಐಆರ್ ದಾಖಲಿಸಿಲ್ಲ ಮತ್ತು ಸರಿಯಾದ ರೀತಿಯಲ್ಲಿ ತನಿಖೆ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಚಾರಣೆ ನಡೆಯುತ್ತಿರುವಾಗಲೇ ಸಂದೇಶವೊಂದು ಬಂದಿದ್ದು, ಘಟನೆಯಲ್ಲಿ ಮೃತಪಟ್ಟ ರೈತರೊಬ್ಬರ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ ಸಿಜೆಐ, ಆಕೆಗೆ ಅಗತ್ಯ ವೈದ್ಯಕೀಯ ನೆರವನ್ನು ನೀಡಬೇಕು, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದರು.

ಭಾನುವಾರ ನಡೆದ ಘಟನೆಯಲ್ಲಿ ನಾಲ್ವರು ರೈತರು ಅಲ್ಲದೆ ಇತರ ನಾಲ್ವರು ಸಾವನ್ನಪ್ಪಿದ್ದರು. ಓರ್ವ ಪತ್ರಕರ್ತ, ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತೋರ್ವ ಚಾಲಕ ಆ ನಾಲ್ವರಾಗಿದ್ದಾರೆ.

Related Articles

Leave a Reply

Your email address will not be published.

Back to top button