Breaking NewsLatest

ಬಿಹಾರದಲ್ಲಿ ಮೈತ್ರಿ ಬಿಕ್ಕಟ್ಟು; ಲಾಲೂ ಜೊತೆ ಸೋನಿಯಾ ಮಾತುಕತೆ

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಬಿಹಾರದಲ್ಲಿ ಬಹುಕಾಲದ ಮಿತ್ರ ಪಕ್ಷವನ್ನು ಅನವಶ್ಯಕ ಹೊರೆ ಎಂದು ಪರಿಗಣಿಸುತ್ತಿರುವ ಸುಳಿವುಗಳ ನಡುವೆಯೇ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರ್​ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‌ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

ಉಪಚುನಾವಣೆ ಹೊತ್ತಿನಲ್ಲಿನ ಈ ಬೆಳವಣಿಗೆ ಮಹತ್ವ ಪಡೆದಿದೆ.

ಮೂರು ವರ್ಷಗಳ ಜೈಲುವಾಸ ಮತ್ತು ಅನಾರೋಗ್ಯದ ಬಳಿಕ ಬಿಹಾರ ರಾಜಕೀಯಕ್ಕೆ ಮರಳಿರುವ ಲಾಲೂ, ಸೋಮವಾರ ಪ್ರತಿಪಕ್ಷಗಳ ಮೈತ್ರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕರ ವಿರುದ್ಧ ಸಾರ್ವಜನಿಕವಾಗಿಯೇ ಟೀಕಿಸಿದ್ದ ಅವರು, ಕಾಂಗ್ರೆಸ್ ಜೊತೆಗಿನ ಮೈತ್ರಿ ತನ್ನ ಪಕ್ಷಕ್ಕೆ ಏನು ಒಳ್ಳೆಯದನ್ನು ಮಾಡಿದೆ ಎಂದು ಪ್ರಶ್ನಿಸಿದ್ದರು.

ಶನಿವಾರ ನಡೆಯಲಿರುವ ತಾರಾಪುರ ಮತ್ತು ಕುಶೇಶ್ವರ ಆಸ್ಥಾನದ ವಿಧಾನಸಭಾ ಉಪಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸ್ಪರ್ಧಿಸುತ್ತಿವೆ. ಇದು ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕಾಂಗ್ರೆಸ್ ಮತ್ತು ಆರ್​ಜೆಡಿ ನಡುವಿನ ಮೈತ್ರಿ ಮುಗಿದ ಅಧ್ಯಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಉಪಯೋಗವಾದರೂ ಏನು ಎಂದು ಪ್ರತಿಕ್ರಿಯಿಸಿದ್ದರು.

ಕಾಂಗ್ರೆಸ್​ಗೆ ಬೆನ್ನಹಾಕುವುದರಿಂದ ಆರ್​ಜೆಡಿಯು ಬಿಜೆಪಿಗೆ ಲಾಭ ಮಾಡಿಕೊಡುತ್ತಿದೆ ಎಂಬ ಕಾಂಗ್ರೆಸ್ ನಾಯಕ ಭಕ್ತ್ ಚರಣ್ ದಾಸ್ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, ಠೇವಣಿ ಕಳೆದುಕೊಳ್ಳುವುದಕ್ಕೋಸ್ಕರ ಕಾಂಗ್ರೆಸ್​ಗೆ ಸೀಟು ಬಿಟ್ಟುಕೊಡಬೇಕೆ? ಆ ಭಕ್ತ್​ ಚರಣ್ ದಾಸ್ ಒಬ್ಬ ಮೂರ್ಖ ವ್ಯಕ್ತಿ ಎಂದು ಲಾಲೂ ತಿರುಗೇಟು ನೀಡಿದ್ದರು.

ಹೀಗೆ ರಾಜ್ಯ ಕಾಂಗ್ರೆಸ್ ನಾಯಕರು ಆರ್​ಜೆಡಿ ವಿರುದ್ಧ ಸಿಟ್ಟಾಗಿರುವಾಗಲೇ, ಅತ್ಯಂತ ಹಳೆಯ ಮಿತ್ರಪಕ್ಷದೊಂದಿಗಿನ ಬಿಕ್ಕಟ್ಟನ್ನು ಮೃದು ಧೋರಣೆಯಿಂದ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ. ಸೋನಿಯಾ ಮತ್ತು ಲಾಲೂ ಪ್ರಸಾದ್ ಯಾದವ್ ಬಹು ಕಾಲದಿಂದಲೂ ಒಳ್ಳೆಯ ರಾಜಕೀಯ ಸಂಬಂಧವನ್ನು ಉಳಿಸಿಕೊಂಡು ಬಂದವರು. 2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಸೋನಿಯಾ ಗಾಂಧಿ ಪ್ರಧಾನಿಯಾಗುವುದನ್ನು ಅವರ ಇಟಲಿ ಮೂಲದ ಕಾರಣದಿಂದೆದ್ದ ವಿರೋಧದ ನಡುವೆಯೂ ಪ್ರಬಲವಾಗಿ ಬೆಂಬಲಿಸಿದ್ದವರು ಲಾಲೂ.

ಕಳೆದ ವರ್ಷ ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೂ, ಕಾಂಗ್ರೆಸ್‌ನ ಹೀನಾಯ ಪ್ರದರ್ಶನವು ರಾಜಕೀಯವಾಗಿ ಉಂಟುಮಾಡಿದ ನಷ್ಟದ ಬಗೆಗಿನ ಅಸಹನೆಯಿಂದಾಗಿ ಲಾಲೂ ಕಾಂಗ್ರೆಸ್ ವಿಚಾರದಲ್ಲಿ ಇಷ್ಟು ಸಿಟ್ಟಾಗುವುದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತಿಪಕ್ಷಗಳ ಮಹಾಘಟಬಂಧನ್ ಬಹುಮತದ ಕೊರತೆಯಿಂದಾಗಿ, ಬಿಜೆಪಿ ಮತ್ತು ನಿತೀಶ್ ಕುಮಾರ್ ಮತ್ತೆ ಅಧಿಕಾರಕ್ಕೆ ಬರುವಂತಾಯಿತು. ಚುನಾವಣೋತ್ತರದ ಆತ್ಮಾವಲೋಕನದ ವೇಳೆ ಅನೇಕ ಮಿತ್ರಪಕ್ಷಗಳು ಕಾಂಗ್ರೆಸ್​ನ್ನು ದೂಷಿಸಿದವು. 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 19 ಸ್ಥಾನಗಳನ್ನು ಮಾತ್ರ ಗೆದ್ದಿತ್ತು.

ರಾಜ್ಯ ಕಾಂಗ್ರೆಸ್ ನಾಯಕರ ಜೊತೆಗಿನ ಸಭೆಯ ನಂತರ ಸೋನಿಯಾ ಗಾಂಧಿ ಅವರು ಲಾಲೂ ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದು, ವಿವಿಧ ರಾಜ್ಯಗಳಲ್ಲಿನ ಪಕ್ಷದ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಉಭಯ ನಾಯಕರು ಚರ್ಚಿಸಿರುವುದಾಗಿ ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button