Breaking NewsLatest

ಅನ್ನದ ವಿಚಾರದಲ್ಲಾದರೂ ಬಿಜೆಪಿ ನಿಜ ಹೇಳಲಿ: ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯವರು ಕನಿಷ್ಠ, ಅನ್ನದ ವಿಚಾರದಲ್ಲಾದರೂ ನಿಜ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಬಿಜೆಪಿಗೆ ಕನಿಷ್ಠ ನೈತಿಕತೆ ಮತ್ತು ಪ್ರಾಮಾಣಿಕತೆ ಇಲ್ಲದಿರುವುದು ನಮ್ಮ ಕಾಲದ ದುರಂತ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಶನಿವಾರ ಈ ಸಂಬಂಧ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿರುವ ಅವರು,1960 ರಿಂದಲೇ ಉಚಿತ ಪಡಿತರ ವ್ಯವಸ್ಥೆ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಕೊರೋನಾ ಸಂದರ್ಭದಲ್ಲಿ ಬಿಜೆಪಿ ಕೇವಲ ಹೆಸರನ್ನು ಬದಲಾಯಿಸಿ ಇದು ತಮ್ಮದೇ ಯೋಜನೆ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಕಾರಣದಿಂದಲೇ ನಾವು ಪದೇ ಪದೇ ಬಿಜೆಪಿಯನ್ನು ಸುಳ್ಳಿನ ಫ್ಯಾಕ್ಟ್ರೀ ಎಂದು ಹೇಳುವುದು ಎಂದಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಅಕ್ಕಿಯನ್ನು 2 ಕೆಜಿಗೆ ಇಳಿಸಿದೆ. ನಾವು ಪ್ರತಿಯೊಬ್ಬರಿಗೆ 2 ಕೆಜಿ ಗೋಧಿ ನೀಡುತ್ತಿದ್ದೆವು. ಈ ಸರ್ಕಾರ ಪ್ರತಿ ಕಾರ್ಡ್ಗೆ 2 ಕೆಜಿ ಯನ್ನು ಮಾಡಿದೆ. ಅಕ್ಕಿ ಹೆಚ್ಚು ಕೊಡಿ ಎಂದು ಜನ ಕೇಳಿದರೆ, ಆಹಾರ ಸಚಿವರಾಗಿದ್ದ ಉಮೇಶ್ ಕತ್ತಿಯವರು ನೀವು ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಮಾತಾಡಿದ್ದರು.

ಕಡು ಬಡವರಿಗೆ ನೀಡುವ ಅಂತ್ಯೋದಯ ಯೋಜನೆಯಲ್ಲಿ ನಾವು ಅಕ್ಕಿ, ಗೋಧಿ, ಬೇಳೆ, ಉಪ್ಪು, ಅಡುಗೆ ಎಣ್ಣೆ ಇತ್ಯಾದಿಗಳನ್ನು ಸೇರಿಸಿದ್ದೆವು. ಈಗಿನ ಬಿಜೆಪಿ ಸರ್ಕಾರ ಏಪ್ರಿಲ್ 2020 ರಿಂದ ಕೇವಲ ಅಕ್ಕಿ ಮಾತ್ರ ನೀಡುತ್ತಿದೆ. ಗೋಧಿ, ಸಕ್ಕರೆ, ಬೇಳೆ ಇವುಗಳನ್ನು ರದ್ದುಮಾಡಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುಪಿಎ ಅವಧಿಯಲ್ಲಿ ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆ ಮತ್ತು ನಾನು ನನ್ನ ಅವಧಿಯಲ್ಲಿ ಘೋಷಿಸಿದ್ದ ಅನ್ನಭಾಗ್ಯ ಯೋಜನೆಯನ್ನೇ ಕಾಪಿ ಮಾಡಿದ ಮೋದಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಕೇವಲ ಹೆಸರನ್ನು ಮಾತ್ರ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ (ಪಿಎಂಜಿಕೆಎವೈ)” ಎಂದು ಹೆಸರು ಬದಲಾಗಿದೆ. ಯುಪಿಎ ಸರ್ಕಾರದ ಯೋಜನೆಯನ್ನು ಹೆಸರು ಬದಲಾಯಿಸಿ ತನ್ನದೇ ಹೊಸ ಯೋಜನೆ ಎಂದು ರಾಷ್ಟಕ್ಕೆ ಸುಳ್ಳು ಹೇಳಿದ ಕೇಂದ್ರ ಸರ್ಕಾರ ಇಷ್ಟಕ್ಕೇ ಸುಮ್ಮನಾಗದೆ, ರಾಷ್ಟಿಯ ಆಹಾರ ಭದ್ರತಾ ಕಾಯ್ದೆಯ ಮೂಲಕ ಮೊದಲೇ ಇದ್ದ 80 ಕೋಟಿ ಫಲಾನುಭವಿಗಳಿಗೆ ಕೇವಲ 8 ತಿಂಗಳ ಅವಧಿಗೆ ಕೋವಿಡ್ ಕಾರಣದಿಂದ ಮಾತ್ರ ಉಚಿತ ಅಕ್ಕಿ ನೀಡುತ್ತಿದ್ದು ಇದು 2021ರ ನವೆಂಬರ್ಗೆ ಕೊನೆಯಾಗಲಿದೆ. ಆ ನಂತರದ ಪರಿಸ್ಥಿತಿ ಏನೆಂದು ದೇವರೇ ಬಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಒಂದು ಕಡೆ ಯುಪಿಎ ಸರ್ಕಾರದ ಯೋಜನೆಯ ಹೆಸರನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಾಯಿಸಿದರೆ, ಮತ್ತೊಂದು ಕಡೆ ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಉಚಿತ ಅಕ್ಕಿಯ ಪ್ರಮಾಣವನ್ನು ದಿಢೀರನೆ 2 ಕೆಜಿಗೆ ಇಳಿಸಿದೆ. ಹಂತ ಹಂತವಾಗಿ ಕಾಂಗ್ರೆಸ್ ಅವಧಿಯ ಆಹಾರ ಭದ್ರತಾ ಕಾಯ್ದೆಯನ್ನು ಕೊಲ್ಲುತ್ತಾ ಬಂದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಪ್ರತಿ ವ್ಯಕ್ತಿಗೆ ನೀಡಲಾಗುತ್ತಿದ್ದ ಉಚಿತ ಅಕ್ಕಿಯ ಪ್ರಮಾಣವನ್ನು 7 ರಿಂದ 2 ಕೆಜಿಗೆ ಇಳಿಸಿದ್ದಲ್ಲದೆ ನಮ್ಮ ಕಾಂಗ್ರೆಸ್ ಸರ್ಕಾರದ ಕನಸಿನ ಯೋಜನೆಯಾಗಿದ್ದ ಇದನ್ನು ಕೇಂದ್ರ ಸರ್ಕಾರದ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ (ಪಿಎಂಜಿಕೆಎವೈ) ಜತೆಗೆ ಜಮೆ ಮಾಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಮತ್ತು ಮಂತ್ರಿಗಳು ಹೇಳುತ್ತಿರುವಂತೆ ಇದು ಕೇಂದ್ರ ಸರ್ಕಾರದ ಹಣದಿಂದಲೇ ನಡೆಯುವ ಯೋಜನೆ ಆಗಿದ್ದರೆ ಏಕೆ ಇದುವರೆಗೂ ಕರ್ನಾಟಕ ಹೊರತಾಗಿ ದೇಶದ ಇತರೆ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಈ ಯೋಜನೆ ಜಾರಿ ಆಗಿಲ್ಲ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button