Breaking NewsLatest

ಗೋಡ್ಸೆಯನ್ನು ದೇಶಭಕ್ತ ಎನ್ನುವವರಿಂದ ಗಾಂಧಿಗೆ ಅಪಮಾನ: ಸಿದ್ದರಾಮಯ್ಯ

ಬೆಂಗಳೂರು: ಗಾಂಧಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗ ತೋರಿದ್ದರೆ, ಭಾರತೀಯ ಜನತಾ ಪಕ್ಷ ಅಸತ್ಯ ಮತ್ತು ಹಿಂಸೆಯ ಹಾದಿಯಲ್ಲಿ ನಂಬಿಕೆ ಇಟ್ಟಿದೆ. ನರೇಂದ್ರ ಮೋದಿ ಅವರ ಮಾತು ಮತ್ತು ನಡೆ ಇವೆರಡೂ ತದ್ವಿರುದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ಬದುಕಿನುದ್ದಕ್ಕೂ ನುಡಿದಂತೆಯೇ ನಡೆದ ಮೇರು ವ್ಯಕ್ತಿತ್ವ ಮಹಾತ್ಮ ಗಾಂಧೀಜಿಯವರದು. ಈ ಕಾಣಕ್ಕಾಗಿಯೇ ಗಾಂಧಿಯವರು ಇಂದು ಕೇವಲ ಭಾರತಕ್ಕಷ್ಟೇ ಸೀಮಿತವಾಗಿರದೆ, ವಿಶ್ವನಾಯಕರಾಗಿದ್ದಾರೆ. ಆದರೆ ನಮ್ಮದೇ ದೇಶದ ಕೇಂದ್ರ ಸರ್ಕಾರ ಗಾಂಧಿ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ, ಅವರ ಬಗ್ಗೆ ಹಗುರಾಗಿ ಮಾತನಾಡುವ ಮೂಲಕ ಮಹಾನ್ ವ್ಯಕ್ತಿಗೆ ಅಪಮಾನ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಾರೆ. ಮೋದಿ ಅವರು ಯಾವುದನ್ನು ಉಳಿಸುತ್ತೇನೆ ಎನ್ನುತ್ತಾರೋ ಅದನ್ನು ನಾಶ ಮಾಡಲು ಹೊರಟಿದ್ದಾರೆ ಎಂದರ್ಥ ಎಂದರು.

ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿಯವರು ದೇಶಭಕ್ತ ಎಂದು ಕರೆಯುತ್ತಾರೆ. ಇಂತಹ ಪಕ್ಷ ಅಧಿಕಾರದಲ್ಲಿ ಇದ್ದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಉಳಿಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಇಂದು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿದಿದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವವರಿಗೆ ದೇಶದ್ರೋಹದ ಸುಳ್ಳು ಆಪಾದನೆಯಡಿ ಜೈಲಿಗೆ ಅಟ್ಟಲಾಗುತ್ತಿದೆ.

ಕಳೆದು ಹತ್ತು ತಿಂಗಳುಗಳಿಂದ ರೈತರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಾತುಕತೆಯ ಬದಲು, ಕ್ರೌರ್ಯ ಮತ್ತು ಬಲಪ್ರಯೋಗದ ಮೂಲಕ ಅವರ ಹೋರಾಟವನ್ನು ಅಂತ್ಯಗೊಳಿಸಲು ಹೊರಟಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗಾಂಧೀಜಿಯವರು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ತತ್ವಾದರ್ಶಗಳು, ವಿಚಾರಧಾರೆಗಳು ನಮ್ಮ ನಡುವೆ ಜೀವಂತವಾಗಿವೆ. ಇಂದಿಗೂ ಜಗತ್ತಿನ ಅನೇಕ ಜನ ಹೋರಾಟಗಾರರಿಗೆ ಮಹಾತ್ಮ ಗಾಂಧಿಯವರು ಸ್ಪೂರ್ತಿಯಾಗಿದ್ದಾರೆ ಎಂದರು.

ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಲಾಲ್ ಬಹಾದ್ದೂರ್ ಶಾಸ್ತ್ರಿ
ಲಾಲ್ ಬಹದ್ದೂರ್ ಶಾಸ್ತ್ರಿ ಅವರು “ಜೈ ಜವಾನ್, ಜೈ ಕಿಸಾನ್” ಎಂಬ ಕರೆ ನೀಡಿದರು. ರೈಲು ದುರಂತ ಸಂಭವಿಸಿದಾಗ ಘಟನೆಯ ನೈತಿಕ ಹೊಣೆ ಹೊತ್ತು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎಂದರೆ ತಪ್ಪಿಲ್ಲ. ಈಗಿನ ರಾಜಕಾರಣದಲ್ಲಿ ನೈತಿಕತೆ ಎಂಬುದು ಕಣ್ಮರೆಯಾಗಿದೆ.

ಶಾಸ್ತ್ರಿ ಅವರು ಪ್ರಧಾನಿಯಾದ ಮೇಲೆ ಅವರ ಮಗ ಕೆಲಸ ಮಾಡುತ್ತಿದ್ದ ಕಂಪನಿ ಮುಂಬಡ್ತಿ ನೀಡಿತು ಎಂಬ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಹೇಳಿ, ಕೆಲಸ ಬಿಡುವಂತೆ ಮಾಡಿದ್ದರು. ಇಂತಹ ಪ್ರಾಮಾಣಿಕತೆ ಈಗಿನ ರಾಜಕಾರಣಗಳಲ್ಲಿ ಕಾಣಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ದೇಶ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಇಂದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಾಂಧಿಯವರ ವಿಚಾರಧಾರೆಗಳು ನಮ್ಮ ಈ ಹೋರಾಟದ ಹಾದಿಗೆ ಬೆಳಕಾಗಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

Related Articles

Leave a Reply

Your email address will not be published.

Back to top button