Breaking NewsLatest

ಅಲ್ಪಸಂಖ್ಯಾತರಿಗೆ ಟಿಕೆಟ್ ಸದುದ್ದೇಶದ್ದಲ್ಲ; ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ಟೀಕೆ

ಮೈಸೂರು : ಜೆಡಿಎಸ್‌ನವರು ಒಳ್ಳೆಯ ಉದ್ದೇಶದಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅಲ್ಪಸಂಖ್ಯಾತ ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕು ಅನ್ನುವ ಆಸಕ್ತಿ ಜೆಡಿಎಸ್‌ಗೆ ಇಲ್ಲ. ಒಂದು ವೇಳೆ ಗೆಲ್ಲಿಸಲೇಬೇಕು ಅನ್ನುವ ಉದ್ದೇಶವಿದ್ದರೆ ರಾಮನಗರ, ಚನ್ನಪಟ್ಟಣ, ಹಾಸನದಲ್ಲಿ ಟಿಕೆಟ್ ಕೊಡಲಿ. ಮೈಸೂರು ಭಾಗದಲ್ಲಿ ಟಿಕೆಟ್ ಕೊಡಲ್ಲ, ಉತ್ತರ ಕರ್ನಾಟಕದಲ್ಲಿ ಟಿಕೆಟ್ ಕೊಡುತ್ತಾರೆ ಎಂದರೆ ಏನರ್ಥ? ಆದರೆ, ಜನ ಬುದ್ದಿವಂತರಿದ್ದಾರೆ. ಇವರ ತಂತ್ರಗಳು ಜನರಿಗೆ ಅರ್ಥವಾಗುತ್ತವೆ ಎಂದು ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.

ಐಟಿ ದಾಳಿಯಲ್ಲಿ ರಾಜಕೀಯ ಇದೆ ಎಂಬುದಕ್ಕೆ ನನ್ನ ಅನುಮಾನ ಇದೆ. ಬಿ.ಎಸ್‌.ಯಡಿಯೂರಪ್ಪ, ವಿಜಯೇಂದ್ರ ಆಪ್ತರನ್ನೇ ಗುರಿಯಾಗಿಸಿ ದಾಳಿ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ನನಗಂತೂ ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ. ಎರಡೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಊಹಾಪೋಹ. ಸೋನಿಯಾ ಗಾಂಧಿಯವರೂ ರಾಷ್ಟ್ರ ರಾಜಕಾರಣಕ್ಕೆ ಕರೆದಿಲ್ಲ. ಆ ಬಗ್ಗೆ ಚರ್ಚೆಯೂ ಆಗಿಲ್ಲ. ಸುಮ್ಮನೆ ಊಹಾಪೋಹದ ಚರ್ಚೆಗಳು ಬೇಡ ಎಂದರು.

ನಾನು ಎಂದೂ ಆ ಯೋಚನೆ ಮಾಡಿಯೂ ಇಲ್ಲ. ಆ ಬಗ್ಗೆ ಚರ್ಚೆ ಬೇಡ, ನಾನು ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿರುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಎರಡೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಅಂತ ಹೇಳುವುದಿಲ್ಲ. ಹಾಗೆ ಹೇಳುವುದಕ್ಕೂ ಸಾಧ್ಯವಿಲ್ಲ. ಆದರೆ, ಫಲಿತಾಂಶದಿಂದ ಈ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನು ಎಂಬುದು ಗೊತ್ತಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರ ಬಂದರೆ ಸ್ವರ್ಗ ಮಾಡುತ್ತೇವೆ ಅಂದಿದ್ದರು. ಈಗ ಬೆಲೆ ಏರಿಕೆಯಿಂದ ಜನರ ಬದುಕು ನರಕ ಆಗಿದೆ. ಹೀಗಾಗಿ, ಕಾಂಗ್ರೆಸ್ ಅನ್ನು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸುತ್ತಾರೆ ಎಂದರು.

Related Articles

Leave a Reply

Your email address will not be published.

Back to top button