ಲಖೀಂಪುರ ಘಟನೆ: ವರುಣ್ ಗಾಂಧಿ ನಿಲುವು ಬೆಂಬಲಿಸಿ ‘ಸಾಮ್ನಾ’ ಸಂಪಾದಕೀಯ
ಮುಂಬೈ: ಲಖೀಂಪುರ ಖೇರಿ ರೈತರ ಹತ್ಯೆ ಪ್ರಕರಣವನ್ನು ಖಂಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ ನಿಲುವನ್ನು ಬೆಂಬಲಿಸಿರುವ ಶಿವಸೇನಾ, ಅವರ ಈ ನಡೆಯನ್ನು ಶ್ಲಾಘಿಸುವ ನಿರ್ಣಯವೊಂದನ್ನು ಕೈಗೊಳ್ಳುವಂತೆ ರೈತ ಸಂಘಟನೆಗಳನ್ನು ಆಗ್ರಹಿಸಿದೆ.
ಶಿವಸೇನಾ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ಕುರಿತು ಬರೆಯಲಾಗಿದೆ. ನಾಲ್ವರು ರೈತರೂ ಸೇರಿ ಎಂಟು ಜನರನ್ನು ಬಲಿ ತೆಗೆದುಕೊಂಡ ಕರಾಳ ಘಟನೆ ನಂತರವೂ ಆಕ್ರೋಶ ವ್ಯಕ್ತಪಡಿಸಲಾರದಷ್ಟು ಮಟ್ಟಿಗೆ ಸಂಸದರ ರಕ್ತ ತಣ್ಣಗಾಗಿ ಹೋಗಿದೆಯೇ ಎಂದು ಸೇನಾ ಪ್ರಶ್ನಿಸಿದೆ.
ದ್ವೇಷವನ್ನು ಹರಡಲು ಮಾಡಿದ ಪ್ರಯತ್ನಗಳನ್ನು ದೇಶವು ಸಹಿಸಲಾರದು. ಲಖೀಂಪುರದ ಕರಾಳ ಘಟನೆಯನ್ನು ಕಂಡ ಬಳಿಕ ಮಾಜಿ ಪ್ರಧಾನಿ ಇಂದಿರಾ ಅವರ ಮೊಮ್ಮಗ, ಸಂಜಯ್ ಗಾಂಧಿಯ ಪುತ್ರ ವರುಣ್ ಅವರ ರಕ್ತ ಕುದಿದಿದೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪರಿಣಾಮಗಳ ಬಗ್ಗೆಯೂ ಯೋಚಿಸದೆ ಅವರು ರೈತರ ಹತ್ಯೆಯನ್ನು ಖಂಡಿಸುವ ಮೂಲಕ ರಾಜಕೀಯ ಧೈರ್ಯ ತೋರಿಸಿದ್ದಾರೆ ಎಂದು ಸಾಮ್ನಾ ಬರೆದಿದೆ.
ಲಖೀಂಪುರ ಘಟನೆಯನ್ನು ಹಿಂದೂ ಸಿಖ್ ಸಂಘರ್ಷವೆಂದು ಬಿಂಬಿಸುವ ಯತ್ನಗಳ ವಿರುದ್ಧ ಭಾನುವಾರ ಎಚ್ಚರಿಕೆ ನೀಡಿದ್ದ ವರುಣ್ ಗಾಂಧಿ, ಇದು ಅತಿ ಅಪಾಯಕಾರಿ. ಮಾಯಲು ಒಂದಿಡೀ ತಲೆಮಾರನ್ನೇ ತೆಗೆದುಕೊಂಡ ಹಳೆಯ ಗಾಯಗಳನ್ನು ಮತ್ತೆ ಕೆದಕಿದಂತೆ ಎಂದಿದ್ದರು.
ಲಖೀಂಪುರ ಘಟನೆಯು ನ್ಯಾಯಕ್ಕಾಗಿ ನಡೆದ ಹೋರಾಟ ಮತ್ತು ದುರಹಂಕಾರಿ ಸ್ಥಳೀಯ ರಾಜಕೀಯ ಪ್ರತಿಷ್ಠೆಯ ಮುಖಾಮುಖಿಯಿಂದಾದ ಅಮಾಯಕ ರೈತರ ಮಾರಣಹೋಮ. ಇದಕ್ಕೆ ಧಾರ್ಮಿಕ ಸಂಬಂಧವಿಲ್ಲ ಎಂದು ವರುಣ್ ಗಾಂಧಿ ಹೇಳಿದ್ದರು.
ಪ್ರತಿಭಟನಾ ನಿರತ ರೈತರನ್ನು ಖಲಿಸ್ತಾನಿಗಳು ಎಂದು ಬಿಂಬಿಸುವುದು ಗಡಿಭಾಗದಲ್ಲಿ ನೆತ್ತರು ಚೆಲ್ಲಿದ ಹೆಮ್ಮೆಯ ತಲೆಮಾರೊಂದರ ನಂತರದ ಪೀಳಿಗೆಯನ್ನು ಅವಮಾನಿಸಿದಂತೆ ಮಾತ್ರವಲ್ಲ, ಅದು ಪ್ರಮಾದಕರ ಪ್ರತಿಕ್ರಿಯೆಗಳನ್ನು ಪ್ರಚೋದಿಸಿದರೆ ದೇಶದ ಐಕ್ಯತೆಗೇ ಧಕ್ಕೆಯಾಗಲೂ ಬಹುದು ಎಂದು ಅವರು ಎಚ್ಚರಿಸಿದ್ದರು.
ಈ ನಡುವೆ, ಘಟನೆಯ ಪ್ರಮುಖ ಆರೋಪಿ, ಮಂತ್ರಿ ಪುತ್ರ ಆಶಿಶ್ ಮಿಶ್ರಾನನ್ನು ಶನಿವಾರ ಬಂಧಿಸಲಾಗಿದ್ದು, ಆತನನ್ನು ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಘಟನೆ ಬಳಿಕ, ಹೋರಾಟ ನಿರತ ರೈತರ ಪರವಾಗಿ ನಿಂತಿರುವ ಬಿಜೆಪಿ ಸಂಸದ ವರುಣ್ ಗಾಂಧಿ ನಿಲುವು ಬಿಜೆಪಿಗೆ ಅರಗಿಸಿಕೊಳ್ಳಲಾಗದಂತಿದ್ದು, ಈಗಾಗಲೇ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಗಿದೆ.