ಪತಿಗೆ ನ್ಯಾಯ ಕೊಡಿಸಿ; ಉದ್ಧವ್ ಠಾಕ್ರೆಗೆ ಸಮೀರ್ ವಾಂಖೆಡೆ ಪತ್ನಿ ಪತ್ರ
ಮುಂಬೈ: ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರ ಮಂತ್ರಿ, ಎನ್ಸಿಪಿ ನಾಯಕ ನವಾಬ್ ಮಲಿಕ್ ಸತತ ಆರೋಪ ಮತ್ತು ವಾಗ್ದಾಳಿ ನಡೆಸುತ್ತಿದ್ದರೆ, ಸಮೀರ್ ಕುಟುಂಬಸ್ಥರು ಇನ್ನೊಂದೆಡೆ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ವಾಂಖೆಡೆ ಸಹೋದರಿ, ವಕೀಲೆ ಯಾಸ್ಮೀನ್ ಇಂದು ಮುಂಬೈ ಪೊಲೀಸರಿಗೆ ದೂರೊಂದನ್ನು ಸಲ್ಲಿಸಿದ್ದು, ನವಾಬ್ ಮಲಿಕ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಈ ನಡುವೆಯೇ, ವಾಂಖೆಡೆ ಪತ್ನಿ ಕ್ರಾಂತಿ ವಾಂಖೆಡೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದು, ಪತಿಗೆ ನ್ಯಾಯ ಕೊಡಿಸುವಂತೆ ಕೋರಿದ್ದಾರೆ. ಮುಖ್ಯಮಂತ್ರಿ ಭೇಟಿಗೂ ಅವರು ಅವಕಾಶ ಕೇಳಿದ್ದಾರೆ.
ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿರುವಂತೆ, ಉದ್ಧವ್ ಠಾಕ್ರೆಗೆ ಬರೆದಿರುವ ಪತ್ರದಲ್ಲಿ ಕ್ರಾಂತಿ, ಇಡೀ ಕುಟುಂಬಕ್ಕೆ ಅವಮಾನವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಜನರೆದುರು ಪ್ರತಿನಿತ್ಯವೂ ತಮಗೆ ಅವಮಾನವಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯದಲ್ಲಿ ಮಹಿಳೆಯ ಘನತೆಗೆ ಕುಂದುಂಟಾಗಿದೆ. ಬಾಳಾಸಾಹೇಬರು ಇಂದು ಇಲ್ಲಿದ್ದರೆ, ಅವರು ಇದನ್ನು ಇಷ್ಟಪಡುತ್ತಿರಲಿಲ್ಲ ಎಂದು ಪತ್ರದಲ್ಲಿ ಕ್ರಾಂತಿ ಹೇಳಿದ್ದಾರೆ.
ಬಾಳಾಸಾಹೇಬರು ಇಂದು ಇಲ್ಲ. ಆದರೆ ನೀವು ಇಲ್ಲಿದ್ದೀರಿ. ನಾವು ಅವರನ್ನು ನಿಮ್ಮಲ್ಲಿ ನೋಡುತ್ತೇವೆ, ನಿಮ್ಮನ್ನು ನಂಬುತ್ತೇವೆ. ನನ್ನ ಕುಟುಂಬಕ್ಕೆ ಮತ್ತು ನನಗೆ ಅನ್ಯಾಯವಾಗಲು ನೀವು ಬಿಡುವುದಿಲ್ಲ ಎಂದು ನಾನು ನಂಬುತ್ತೇನೆ. ಒಬ್ಬ ಮರಾಠಿಯಾಗಿ, ನಾನು ನ್ಯಾಯದ ಭರವಸೆಯೊಂದಿಗೆ ನಿಮ್ಮ ಕಡೆಗೆ ನೋಡುತ್ತೇನೆ. ನ್ಯಾಯಕ್ಕಾಗಿ ನಾನು ನಿಮ್ಮನ್ನು ಕೇಳುತ್ತೇನೆ ಎಂದು ಉದ್ಧವ್ ಅವರಿಗೆ ಬರೆದ ಪತ್ರದಲ್ಲಿ ಕ್ರಾಂತಿ ಹೇಳಿರುವುದಾಗಿ ವರದಿಯಾಗಿದೆ.
ಮುಖ್ಯಮಂತ್ರಿ ಭೇಟಿಗೆ ಸಮಯ ಕೇಳಿರುವುದಾಗಿಯೂ ಹೇಳಿಕೊಂಡಿರುವ ಕ್ರಾಂತಿ, ಮುಖ್ಯಮಂತ್ರಿ ಕಚೇರಿಯ ಉತ್ತರಕ್ಕಾಗಿ ಕಾದಿದ್ದೇನೆ ಎಂದು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.