ಆರ್ಯನ್ ಖಾನ್ ಕೇಸ್ ತನಿಖೆಯಿಂದ ಸಮೀರ್ ವಾಂಖೆಡೆ ಹೊರಕ್ಕೆ
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್ ವಿಚಾರದಲ್ಲಿ 8 ಕೋಟಿ ಲಂಚ ಪಡೆದ ಆರೋಪ ಹೊತ್ತಿರುವ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಎನ್ಸಿಬಿ ಮುಂಬೈ ಘಟಕದಿಂದ ವರ್ಗಾಯಿಸಲಾಗಿದೆ.
ಆರ್ಯನ್ ಖಾನ್ ಪ್ರಕರಣವೂ ಸೇರಿ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರು ಕೇಸ್ಗಳನ್ನು ಬೇರೊಬ್ಬ ಅಧಿಕಾರಿಗೆ ವಹಿಸಿಕೊಡಲಾಗಿದೆ.
ವಿಶೇಷ ತನಿಖಾ ತಂಡದ ನೇತೃತ್ವವನ್ನು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ ವಹಿಸಿಕೊಂಡಿದ್ದಾರೆ. ಸಿಂಗ್ ಅವರು ಓಡಿಶಾ ಕೇಡರ್ನ 1996ರ ಬ್ಯಾಚ್ನ ಅಧಿಕಾರಿಯಾಗಿದ್ದಾರೆ.
ಈ ಮೊದಲು ಎನ್ಸಿಬಿ ಯಾವುದೇ ಅಧಿಕಾರಿಯನ್ನು ಅವರು ಸದ್ಯ ನಿರ್ವಹಿಸುತ್ತಿರುವ ಹೊಣೆಗಾರಿಕೆಯಿಂದ ಹೊರ ಕಳಿಸುವ ಮಾತೇ ಇಲ್ಲ ಎಂದು ಮತ್ತೆ ಮತ್ತೆ ಹೇಳಿತ್ತು. ಇದೀಗ ವಾಂಖೆಡೆ ಎಸ್ಊಟಿಯಿಂದ ಹೊರಹೋಗುತ್ತಿರುವ ಸುದ್ದಿ ಬಂದಿದೆ.
ಆದರೆ ಸುದ್ದಿ ಹೊರಬೀಳು್ತತಿದ್ದಂತೆಯೇ ಪ್ರತಿಕ್ರಿಯಿಸಿರುವ ವಾಂಖೆಡೆ, ತಮ್ಮನ್ನು ತನಿಖೆಯಿಂದ ಹೊರಹಾಕಲಾಗಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ತಮ್ಮ ಮೇಲಿನ ಆರೋಪದ ಸಂಬಂಧ ಸಿಬಿಐ ಇಲ್ಲವೆ ಎನ್ಐಎ ತನಿಖೆ ನಡೆಸಲಿ ಎಂದು ಬಾಂಬೇ ಹೈಕೋರ್ಟ್ ಎದುರು ಹಾಕಿಕೊಂಡಿರುವ ಅರ್ಜಿಯಲ್ಲಿ ತಾವು ಕೇಳಿಕೊಂಡಿದ್ದ ಹಿನ್ನೆಲೆಯಲ್ಲಿ ಎಸ್ಐಟಿಯನ್ನು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ರಚಿಸಲಾಗಿದೆ ಎಂದು ವಾಂಖೆಡೆ ಹೇಳಿರುವುದಾಗಿ ತಿಳಿದುಬಂದಿದೆ.
ಮಹಾರಾಷ್ಟ್ರ ಮಂತ್ರಿ ನವಾಬ್ ಮಲಿಕ್ ಅವರ ಸತತ ಆರೋಪ, ಅದಕ್ಕಿಂತ ಮುಖ್ಯವಾಗಿ ಆರ್ಯನ್ ಖಾನ್ ಕೇಸ್ನಲ್ಲಿ ಎನ್ಸಿಬಿಯ ಓರ್ವ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಮಾಡಿದ ಆರೋಪದ ಬಳಿಕ ವಾಂಖೆಡೆ ವಿವಾದದ ಕೇಂದ್ರವಾಗಿದ್ದರು. ಅವರು ತನಿಖೆ ನಡೆಸುತ್ತಿರುವ ಪ್ರಕರಣಗಳ ವಿಚಾರದಲ್ಲಿ ಪ್ರಶ್ನೆಗಳೆದ್ದಿದ್ದವು.
ಆದರೆ ಬಹಿರಂಗವಾಗಿಯೇ ವಾಂಖೆಡೆಗೆ ಬೆಂಬಲ ವ್ಯಕ್ತಪಡಿಸಿದ್ದ ಎನ್ಸಿಬಿ, ಅವರು ಪ್ರಾಮಾಣಿಕ ಕಳಂಕರಹಿತ ಸೇವಾ ದಾಖಲೆ ಹೊಂದಿರುವುದಾಗಿ ಸ್ಪಷ್ಪಪಡಿಸಿತ್ತು.