Breaking NewsLatest

ಯೋಗಿ ಟೀಕೆಗೆ ಪ್ರತ್ಯುತ್ತರ; ಮತ್ತೆ ಪೊರಕೆ ಹಿಡಿದ ಪ್ರಿಯಾಂಕಾ

ಲಕ್ನೋ: ಜಾತಿನಿಂದಕ ಹೇಳಿಕೆಯು ಯೋಗಿ ಆದಿತ್ಯನಾಥ್ ಬಾಯಿಂದ ಬಂದ ಬೆನ್ನಲ್ಲೇ ಅದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಶುಕ್ರವಾರ ಲಕ್ನೋದಲ್ಲಿನ ದಲಿತ ಕಾಲೊನಿಯಲ್ಲಿ ಕಾಣಿಸಿಕೊಂಡು, ಸಫಾಯಿ ಕರ್ಮಚಾರಿಗಳೊಂದಿಗೆ ಪೊರಕೆ ಹಿಡಿದು ಅಚ್ಚರಿ ಮೂಡಿಸಿದ್ದಾರೆ.

ಲಖೀಂಪುರಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸರು ಬಂಧಿಸಿ ಸೀತಾಪುರ ಅತಿಥಿಗೃಹದಲ್ಲಿರಿಸಿದ್ದಾಗ ಪ್ರಿಯಾಂಕ ಗಾಂಧಿ ಅಲ್ಲಿ ಪೊರಕೆಯಿಂದ ನೆಲ ಗುಡಿಸಿದ್ದ ಸಂದರ್ಭವನ್ನು ಪ್ರಸ್ತಾಪಿಸಿ ಯೋಗಿ ಆದಿತ್ಯನಾಥ್, ಜನರು ಇಂಥದ್ದಕ್ಕೆ ಮಾತ್ರವೇ ಅರ್ಹರಾಗಿರಲು ಬಯಸುತ್ತಾರೆ ಮತ್ತು ತಮ್ಮನ್ನು ಅಷ್ಟಕ್ಕೇ ಸೀಮಿತಗೊಳಿಸಿಕೊಳ್ಳುತ್ತಾರೆ ಎಂದು ನಿನ್ನೆ ಬೆಳಗ್ಗೆ ಟೀಕಿಸಿದ್ದಕ್ಕೆ ಪ್ರಿಯಾಂಕಾ ಕೊಟ್ಟ ತಿರುಗೇಟು ಇದು.

ಯೋಗಿ ಟೀಕೆಯ ಬೆನ್ನಲ್ಲೇ ಪ್ರಿಯಾಂಕಾ, ಈ ಬಗೆಯ ಪ್ರತಿಕ್ರಿಯೆ ಕೊಟ್ಟಿದ್ದಲ್ಲದೆ, ಎಲ್ಲಾ ಜಿಲ್ಲೆಗಳಲ್ಲಿನ ವಾಲ್ಮೀಕಿ ದೇವಾಲಯಗಳನ್ನು ಶನಿವಾರ ಪಕ್ಷದ ಜಿಲ್ಲಾ ಸಮಿತಿಗಳು ಶುಚಿಗೊಳಿಸಲಿವೆ ಎಂದು ಬಳಿಕ ಟ್ವೀಟ್ ಮಾಡಿದರು.

ಯುಪಿ ಮುಖ್ಯಮಂತ್ರಿಯ ಟೀಕೆ ಬಳಿಕ ಶುಕ್ರವಾರ ದಲಿತ ಕಾಲೊನಿಯಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ, ಪೊರಕೆಯನ್ನೆತ್ತಿಕೊಂಡು ಇದು ಸರಳತೆ ಮತ್ತು ಆತ್ಮಾಭಿಮಾನದ ಸಂಕೇತ ಎಂದರು.

ಲವಕುಶ ನಗರದಲ್ಲಿನ ಮಹರ್ಷಿ ವಾಲ್ಮೀಕಿ ಮಂದಿರದ ಆವರಣವನ್ನು ಪ್ರಿಯಾಂಕಾ ಶುಚಿಗೊಳಿಸಿದರು. ದೇಶದಲ್ಲಿ ಕೋಟ್ಯಂತರ ಮಹಿಳೆಯರು ಮತ್ತು ಸ್ವಚ್ಛತಾ ಕಾರ್ಮಿಕರು ನಿತ್ಯವೂ ಪೊರಕೆ ಹಿಡಿಯುತ್ತಾರೆ ಎಂದ ಅವರು, ಮಂದಿರದಲ್ಲಿ ಪ್ರಾರ್ಥನೆಯನ್ನು ಮಾಡಿದರು.

ಮುಖ್ಯಮಂತ್ರಿ ಹಾಗೆ ಹೇಳುವ ಮೂಲಕ ನನ್ನನ್ನು ಅವಮಾನಿಸಿಲ್ಲ. ಸಫಾಯಿ ಕರ್ಮಚಾರಿಗಳಾಗಿರುವ ಕೋಟ್ಯಂತರ ದಲಿತ ಸಹೋದರ ಸಹೋದರಿಯರನ್ನು ಅವಮಾನಿಸಿದ್ದಾರೆ. ನಾನಿಲ್ಲಿ ನಿಮ್ಮೊಂದಿಗೆ ಶುಚಿಗೊಳಿಸಲು ಬಂದಿರುವುದು, ಸ್ವಚ್ಛತೆ ಮತ್ತು ಪೊರಕೆಯ ಬಳಕೆ ಆತ್ಮಾಭಿಮಾನದ ಸಂಕೇತವೆಂದು ಯೋಗಿಯವರಿಗೆ ಅರ್ಥ ಮಾಡಿಸುವುದಕ್ಕಾಗಿ ಎಂದು ಪ್ರಿಯಾಂಕಾ ಹೇಳಿದರು.

ಯೋಗಿ ಆದಿತ್ಯನಾಥ್ ಜಾತಿನಿಂದಕ ಹೇಳಿಕೆ ಮೂಲಕ ತಮ್ಮ ದಲಿತ ವಿರೋಧಿ ಮನಃಸ್ಥಿತಿಯನ್ನು ತೋರಿಸಿದ್ದಾರೆ. ದೇಶದ ಕೋಟ್ಯಂತರ ದಲಿತರು ಮತ್ತು ಮಹಿಳೆಯರನ್ನು ಅವಮಾನಿಸುವುದನ್ನು ದೇಶ ಸಹಿಸದು ಎಂದು ಪ್ರಿಯಾಂಕ ಟ್ವೀಟ್ ಒಂದರಲ್ಲಿ ತಾವು ಪೊರಕೆ ಹಿಡಿದು ಶುಚಿಗೊಳಿಸುತ್ತಿರುವ ಚಿತ್ರದೊಂದಿಗೆ ಪ್ರತ್ಯುತ್ತರ ಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button