ಮೋದಿ ಇದ್ದರೂ ಇಲ್ಲದಿದ್ದರೂ ಬಿಜೆಪಿ ಇರಲಿದೆ; ರಾಹುಲ್ ಅರ್ಥ ಮಾಡಿಕೊಳ್ಳುತ್ತಿಲ್ಲ: ಪ್ರಶಾಂತ್ ಕಿಶೋರ್
ನವದೆಹಲಿ: ಚುನಾವಣಾ ರಣತಂತ್ರ ಪರಿಣಿತ ಪ್ರಶಾಂತ್ ಕಿಶೋರ್ ಇತ್ತೀಚಿನ ದಿನಗಳಲ್ಲಿ ಹಾಕುತ್ತಿರುವ ಒಂದೋಂದೇ ಬಾಂಬ್ಗಳನ್ನು ನೋಡಿದರೆ, ಕಾಂಗ್ರೆಸ್ ಜೊತೆಗಿನ ಅವರ ಸಂಬಂಧ ಸಂಪೂರ್ಣ ಹಳಸಿದೆ ಎಂಬುದು ಖಚಿತವಾಗುತ್ತಿದೆ. ಅದಕ್ಕೆ ಮತ್ತೂ ಒಂದು ಪುರಾವೆಯೆಂಬಂತೆ ಪ್ರಶಾಂತ್ ಕಿಶೋರ್ ಹೊಸ ಹೇಳಿಕೆ ನೀಡಿದ್ದಾರೆ.
ಹಲವು ದಶಕಗಳವರೆಗೆ ಬಿಜೆಪಿ ಎಲ್ಲಿಗೂ ಹೋಗದು. ಆದರೆ, ರಾಹುಲ್ ಗಾಂಧಿಯವರ ಸಮಸ್ಯೆಯೆಂದರೆ, ಇದನ್ನು ಅರಿತುಕೊಳ್ಳದೇ ಇರುವುದು ಎಂದು ಪ್ರಶಾಂತ್ ಕಿಶೋರ್ ನಿನ್ನೆ ಗೋವಾದಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಸ್ವಾತಂತ್ರ್ಯಾನಂತರದ ಮೊದಲ 40 ವರ್ಷಗಳಲ್ಲಿ ಕಾಂಗ್ರೆಸ್ ಹೇಗಿತ್ತೋ ಹಾಗೆಯೇ, ಬಿಜೆಪಿಕೂಡ ಮೂಮದಿನ ವರ್ಷ ಗೆದ್ದರೂ ಸೋತರೂ ದೇಶದ ರಾಜಕೀಯದ ಕೇಂದ್ರಬಿಂದುವಾಗಿಯೇ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸನ್ನಿವೇಶದಲ್ಲಿ ಶೇ. 30ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡರೆ ಜನರಿಂದ ಅಷ್ಟಯ ಬೇಗ ದೂರಹೋಗಲಾರಿರಿ. ಹಾಗಾಗಿ, ಜನರು ಕೋಪಗೊಳ್ಳುತ್ತಾರೆ ಮತ್ತು ಅವರು ಮೋದಿಯವರನ್ನು ತಿರಸ್ಕರಿಸುತ್ತಾರೆ ಎಂಬ ಭ್ರಮೆ ಬೇಡ. ಒಂದು ವೇಳೆ ಜನರು ಮೋದಿಯವರನ್ನು ತಿರಸ್ಕರಿಸಿದರೂ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ. ಅದು ಹೀಗೇ ಇರಲಿದೆ. ಮುಂದಿನ ಹಲವು ದಶಕಗಳವರೆಗೆ ಅದು ಪ್ರಭಾವಿಯಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಬಹುಶಃ ಸಮಸ್ಯೆ ಇರುವುದು ರಾಹುಲ್ ಗಾಂಧಿಯವರಲ್ಲಿ. ಜನರು ಒಂದು ಹಂತದಿಂದ ಬಿಜೆಪಿಯನ್ನು ದೂರ ಮಾಡಲಿದ್ದಾರೆ ಎಂಬುದು ಅವರ ಭಾವನೆ. ಆದರೆ ಹಾಗಾಗದು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ನೀವು ಮೋದಿ ಶಕ್ತಿಯನ್ನು ಪರೀಕ್ಷಿಸಿ ಅರ್ಥ ಮಾಡಿಕೊಳ್ಳಬೇಕು. ಅದನ್ನು ಅರ್ಥ ಮಾಡಿಕೊಳ್ಳದ ಹೊರತು ನೀವು ಅವರನ್ನು ಸೋಲಿಸುವ ಪ್ರತಿತಂತ್ರ ರೂಪಿಸಲು ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.