ತವಾಂಗ್ ಸೆಕ್ಟರ್ನಲ್ಲಿ ಚೀನಾ ಸೇನೆಯ ಗಸ್ತು ಹೆಚ್ಚಳ; ಸೇನೆ ಹೇಳುತ್ತಿರುವುದಕ್ಕಿಂತ ಬೇರೆಯೇ ಇದೆ ವಾಸ್ತವ
ನವದೆಹಲಿ: ಪೂರ್ವ ಗಡಿ ವಲಯದಲ್ಲಿ ಚೀನಾ ಸೇನೆಯ ಚಟುವಟಿಕೆಗಳು ಅಷ್ಟೇನೂ ಹೆಚ್ಚಿಲ್ಲ ಎಂದು ಸೇನಾ ಅಧಿಕಾರಿಗಳು ಹೇಳುತ್ತಿದ್ದರೂ, ತವಾಂಗ್ ಸೆಕ್ಟರ್ನಲ್ಲಂತೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಹಿರಿಯ ಅಧಿಕಾರಿಗಳ ಗಸ್ತು ಮತ್ತು ಭೇಟಿಗಳು ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ 2020 ಮತ್ತು 2021ರಲ್ಲಿ ಗಮನಾರ್ಹವಾಗಿ ಹೆಚ್ಚಿದೆ ಎಂಬ ಸಂಗತಿ ಬಯಲಾಗಿದೆ.
ಸೇನೆ ತನ್ನ ಕಣ್ಗಾವಲು ಮೂಲಕ ಸಂಗ್ರಹಿಸಿದ ದತ್ತಾಂಶಗಳೇ ಇದನ್ನು ಹೇಳುತ್ತಿವೆ. ಸೇನೆಯು ಹೊಂದಿರುವ ಮಾಹಿತಿಯ ಪ್ರಕಾರ, ತವಾಂಗ್ನಲ್ಲಿನ ಮೂರು ವಲಯಗಳಲ್ಲಿ ಪಿಎಲ್ಎ ಕಳೆದ ವರ್ಷದಿಂದ ತನ್ನ ಗಸ್ತು ಚಟುವಟಿಕೆಗಳು, ತರಬೇತಿ ಮತ್ತು ಹಿರಿಯ ಅಧಿಕಾರಿಗಳ ಭೇಟಿಗಳನ್ನು ಹೆಚ್ಚಿಸಿದೆ. ಲುಂಗ್ರೋಲಾ, ಝಿಮಿತಾಂಗ್ ಮತ್ತು ಬುಮ್ಲಾ ವಲಯಗಳುಲ್ಲಿ ಚೀನಾ ಸೇನೆಯ ಇಂಥ ಚಟುವಟಿಕೆಗಳು ತೀವ್ರವಾಗಿವೆ.
ಝಿಮಿತಾಂಗ್ ಸೆಕ್ಟರ್ನಲ್ಲಿ ಚೀನಾ ಸೇನೆಯ ಚಟುವಟಿಕೆಯಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದೆ. ಅಲ್ಲಿ ಪಿಎಲ್ಎ ಹಿರಿಯ ಅಧಿಕಾರಿಗಳ ಭೇಟಿಗಳು 2019ರಲ್ಲಿ 33ರಷ್ಟಿದ್ದದ್ದು 2020ರಲ್ಲಿ 102ಕ್ಕೆ ಏರಿದೆ. ಈ ವರ್ಷದ ಸೆಪ್ಟೆಂಬರ್ವರೆಗೆ ಪಿಎಲ್ಎ ಅಧಿಕಾರಿಗಳು ಈಗಾಗಲೇ 84 ಸಲ ಭೇಟಿ ನೀಡಿದ್ದಾರೆ. ಈ ವಲಯದಲ್ಲಿ ಪಿಎಲ್ಎ ಗಸ್ತು ಕೂಡ ಹೆಚ್ಚುತ್ತಿದೆ. 2019ರಲ್ಲಿ ಆರು ಗಸ್ತುಗಳು ನಡೆದದ್ದು ಗಮನಕ್ಕೆ ಬಂದಿತ್ತು. ಅದು 2020ರಲ್ಲಿ 11ಕ್ಕೆ ಏರಿತು. ಈ ವರ್ಷ ಸೆಪ್ಟೆಂಬರ್ವರೆಗೆ ಈ ಪ್ರದೇಶದಲ್ಲಿ ಈಗಾಗಲೇ 12 ಗಸ್ತುಗಳು ನಡೆದಿವೆ.
ಲುಂಗ್ರೋಲಾದಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. 2019 ಮತ್ತು 2018ರಲ್ಲಿ ಕ್ರಮವಾಗಿ 21 ಮತ್ತು 19 ಗಸ್ತಗಳು ನಡೆದಿದ್ದರೆ, 2020ರಲ್ಲಿ ಅದು 34ಕ್ಕೆ ಜಿಗಿದಿದೆ. ಈ ವರ್ಷ ಪಿಎಲ್ಎ ಈಗಾಗಲೇ 50ಕ್ಕೂ ಹೆಚ್ಚು ಗಸ್ತುಗಳನ್ನು ನಡೆಸಿದೆ. ಈ ಪ್ರದೇಶದಲ್ಲಿ ಪಿಎಲ್ಎ ಅಧಿಕಾರಿಗಳು 2019 ಮತ್ತು 2018ರಲ್ಲಿ ಕ್ರಮವಾಗಿ ನಾಲ್ಕು ಮತ್ತು ಆರು ಬಾರಿ ಭೇಟಿ ನೀಡಿದ್ದರು. 2020ರಲ್ಲಿ 15 ಸಲ ಭೇಟಿ ನೀಡಿದ್ದರೆ, 2021ರ ಸೆಪ್ಟೆಂಬರ್ವರೆಗೆ ಕನಿಷ್ಠ 20 ಬಾರಿ ಭೇಟಿ ನೀಡಿದ್ದಾರೆ.
ಇನ್ನು, ಮೂರನೆಯದು ಬುಮ್ಲಾ ಸೆಕ್ಟರ್. ಇದು ಎರಡೂ ಕಡೆಯ ಅಧಿಕಾರಿಗಳು ಭೇಟಿಯಾಗಲು ಗಡಿ ಸಿಬ್ಬಂದಿ ಸಭೆಯ ಸ್ಥಳವನ್ನು (ಬಿಎಂಪಿ) ಹೊಂದಿದೆ. ಇಲ್ಲಿ ಮಾತ್ರವೇ ಪಿಎಲ್ಎ ಚಟುವಟಿಕೆಯಲ್ಲಿನ ಏರಿಕೆ ಅಷ್ಟಿಲ್ಲ. 2018 ಮತ್ತು 2019ರಲ್ಲಿ ಪಿಎಲ್ಎ ಇಲ್ಲಿ ಕ್ರಮವಾಗಿ 17 ಮತ್ತು 16 ಗಸ್ತುಗಳು ನಡೆದಿದ್ದರೆ, 2020ರಲ್ಲಿ 21ಕ್ಕೆ ಏರಿತು ಮತ್ತು ಈ ವರ್ಷ ಸೆಪ್ಟೆಂಬರ್ವರೆಗೆ 19 ಗಸ್ತುಗಳಾಗಿವೆ. ಈ ಪ್ರದೇಶಕ್ಕೆ 2018 ಮತ್ತು 2019ರಲ್ಲಿ ಕೇವಲ ಒಮ್ಮೆ ಭೇಟಿ ನೀಡಿದ್ದ ಪಿಎಲ್ಎ ಅಧಿಕಾರಿಗಳು, ಕಳೆದ ವರ್ಷ ಐದು ಬಾರಿಬಂದಿದ್ದರು. ಈ ವರ್ಷ ಸೆಪ್ಟೆಂಬರ್ವರೆಗೆ 20 ಸಲ ಭೇಟಿ ನೀಡಿದ್ದಾರೆ.
ಸೇನೆಯು ನಿರ್ವಹಿಸುವ ಆ್ಯಕ್ಟಿವಿಟಿ ಮ್ಯಾಟ್ರಿಕ್ಸ್, ಭೂ-ಆಧಾರಿತ ಕ್ಯಾಮೆರಾಗಳು, ರಾಡಾರ್ಗಳು ಮತ್ತು ಮಾನವರಹಿತ ವಿಮಾನಗಳ ಮೂಲಕ ಪಿಎಲ್ಎ ಚಟುವಟಿಕೆಯನ್ನು ಗಮನಿಸುತ್ತಿದೆ. ಇದು ಆಳವಾದ ಪ್ರದೇಶದಲ್ಲಿನ ಚಟುವಟಿಕೆಯನ್ನೂ ವಿವರಗಳನ್ನೂ ಸೆರೆಹಿಡಿಯುತ್ತದೆ. 2020ರ ಬಿಕ್ಕಟ್ಟಿನ ಬಳಿಕ ಕಳೆದ ವರ್ಷದಿಂದ ಮತ್ತೆ ಕಾರ್ಯಾಚರಣೆ ಶುರುವಾಗಿರುವುದೇ ಪಿಎಲ್ಎ ಹೆಚ್ಚಿನ ಚಟುವಟಿಕೆಗಳಿಗೆ ಕಾರಣ.
ತವಾಂಗ್ ಸೆಕ್ಟರ್ನಾದ್ಯಂತ ಲಘು ಮತ್ತು ಭಾರೀ ವಾಹನಗಳ ಸಂಚಾರದಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. ಹಿಂದಿನ ವರ್ಷಗಳ ಡೇಟಾವನ್ನು ಮ್ಯಾಟ್ರಿಕ್ಸ್ ಹೊಂದಿಲ್ಲವಾದರೂ, ಅದು ಗುರುತಿಸುವ ಪ್ರಕಾರ, ಹೆಚ್ಚಿದ ವಾಹನ ಓಡಾಟವು ಮೂಲ ಸೌಕರ್ಯಗಳ ಅಭಿವೃದ್ಧಿಯಾಗಿರುವುದರ ಪರಿಣಾಮವೇ ಆಗಿದೆ.
ತವಾಂಗ್, ಚೀನಾದ ಗಡಿಯೊಂದಿಗೆ ಭಾರತದ ಅತ್ಯುತ್ತಮ ರಕ್ಷಿತ ವಲಯಗಳಲ್ಲಿ ಒಂದು. ಮೇ 2020ರಲ್ಲಿ ಲಡಾಖ್ನಲ್ಲಿ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಕೆಲವು ಪ್ರದೇಶಗಳಲ್ಲಿ ಪಿಎಲ್ಎ ಗಸ್ತು ತಿರುಗುವಿಕೆಯಲ್ಲಿ ಕೊಂಚವೇ ಹೆಚ್ಚಳವಾಗಿದೆ ಎಂದು ಸೇನಾ ಅಧಿಕಾರಿಗಳು ಕಳೆದ ವಾರ ಹೇಳಿದ್ದರೂ, ವಾಸ್ತವ ಬೇರೆಯೇ ಇದೆ.