Breaking NewsLatest

ಪಂಡೋರ ಪೇಪರ್ಸ್: ಜಗತ್ತಿನ ಗಣ್ಯರು, ಪ್ರತಿಷ್ಠಿತ ಭಾರತೀಯರ ಸಾಗರೋತ್ತರ ವ್ಯವಹಾರ ಬಯಲು; ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಹೆಸರು

ನವದೆಹಲಿ: ವಿಶ್ವದ ಹಲವು ಗಣ್ಯರ ಹಣಕಾಸು ವ್ಯವಹಾರ ಮತ್ತು ತೆರಿಗೆ ತಪ್ಪಿಸಿಕೊಳ್ಳಲು ಮಾಡಿದ ಯತ್ನಗಳ ಕುರಿತಂತೆ ರಹಸ್ಯ ದಾಖಲೆಗಳು ಪಂಡೋರ ಪೇಪರ್ಸ್ ಹೆಸರಿನಲ್ಲಿ ಸೋರಿಕೆಯಾಗಿವೆ.

ಭಾರತ ಸೇರಿದಂತೆ 91 ರಾಷ್ಟ್ರಗಳ 330ಕ್ಕೂ ಹೆಚ್ಚು ಗಣ್ಯರಿಗೆ ಸಂಬಂಧಿತ ಈ ರಹಸ್ಯ ದಾಖಲೆಗಳಲ್ಲಿ ಹೊರರಾಷ್ಟ್ರಗಳಲ್ಲಿನ ಹಣಹೂಡಿಕೆ ಬಗ್ಗೆ ಮಾಹಿತಿಗಳಿವೆ.

91 ದೆಶಗಳ ರಾಜಕೀಯ ನಾಯಕರು, ಅಧಿಕಾರಿಗಳು ಮತ್ತು ಸೆಲೆಬ್ರಿಟಿಗಳ ಹಣಕಾಸಿನ ರಹಸ್ಯ ಪಂಡೋರ ಪೇಪರ್ಸ್ ಮೂಲಕ ಬಹಿರಂಗಗೊಂಡಿದೆ. ಪ್ರತಿಷ್ಠಿತ ಭಾರತೀಯರು ತಮ್ಮ ಸಂಪತ್ತು ಬಚ್ಚಿಡಲು ಕಂಡುಕೊಂಡ ಹೊಸ ಬಗೆಯ ದಾರಿಗಳ ಸುಳಿವು ಈ ಮೂಲಕ ಬಯಲಾಗಿದೆ.

ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತವರ ಕುಟುಂಬ ಸದಸ್ಯರ ಹೆಸರುಗಳೂ ಈ ದಾಖಲೆಗಳಲ್ಲಿರುವುದು ಗೊತ್ತಾಗಿದೆ. ಉದ್ಯಮಿ ಅನಿಲ್ ಅಂಬಾನಿಯ ಸಾಗರೋತ್ತರ ಹಣಕಾಸು ವ್ಯವಹಾರಗಳ ವಿವರವೂ ಇದರಲ್ಲಿವೆ.

ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್​ ಮೂಲದ ಕಂಪನಿಯ ಫಲಾನುಭವಿ ಮಾಲೀಕತ್ವ ಮತ್ತು ನಿರ್ದೇಶಕರ ಹುದ್ದೆಗಳಲ್ಲಿ ಸಚಿನ್ ತೆಂಡೂಲ್ಕರ, ಅವರ ಪತ್ನಿ ಅಂಜಲಿ ತೆಂಡೂಲ್ಕರ್, ಮಾವ ಆನಂದ್ ಮೆಹ್ತಾ ಹೆಸರುಗಳಿರುವುದು ಈ ದಾಖಲೆಗಳ ಮೂಲಕ ಬಹಿರಂಗಗೊಂಡಿದೆ.

ಅದರಂತೆ, ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ 8,56,702 ಡಾಲರ್, ಅಂಜಲಿ ತೆಂಡೂಲ್ಕರ್ ಹೆಸರಿನಲ್ಲಿ, 13,75,714 ಡಾಲರ್ ಹಾಗೂ ಆನಂದ್ ಮೆಹ್ತಾ ಹೆಸರಿನಲ್ಲಿ 4,53,082 ಡಾಲರ್ ಮೌಲ್ಯದ ಷೇರುಗಳಿರುವುದನ್ನು ಈ ದಾಖಲೆಗಳು ಬಹಿರಂಗಪಡಿಸಿವೆ.

ಇಂಗ್ಲೆಂಡ್​ನ ಬಿಬಿಸಿ ಮತ್ತು ಗಾರ್ಡಿಯನ್, ಭಾರತದ ಇಂಡಿಯನ್ ಎಕ್ಸ್​ಪ್ರೆಸ್​ ಪತ್ರಿಕೆ ಸೇರಿದಂತೆ ವಿಶ್ವದ 150 ಮಾಧ್ಯಮ ಸಂಸ್ಥೆಗಳ 600ಕ್ಕೂ ಹೆಚ್ಚು ಪತ್ರಕರ್ತರು 2 ವರ್ಷ ನಡೆಸಿದ ತನಿಖೆಯಲ್ಲಿ ಬಯಲಾಗಿರುವ ಕೋಟ್ಯಂತರ ರಹಸ್ಯ ದಾಖಲೆಗಳೇ ಪಂಡೋರ ಪೇಪರ್ಸ್. ಗಣ್ಯರ ಹಣಕಾಸು ಹೂಡಿಕೆಯ ರಹಸ್ಯ ಬಯಲಿಗೆಳೆಯುವ ಉದ್ದೇಶದಿಂದಲೆ ನಡೆದ ತನಿಖೆಯ ಮೂಲಕ ಬಹಿರಂಗವಾಗಿರುವ ಈ ದಾಖಲೆಗಳು ವಿಶ್ವದ ನೂರಾರು ಗಣ್ಯರ ಹಣಕಾಸು ವ್ಯವಹಾರಗಳ ಜಾತಕವನ್ನು ಹೊರಜಗತ್ತಿಗೆ ತೆರೆದಿಟ್ಟಿವೆ.

Related Articles

Leave a Reply

Your email address will not be published. Required fields are marked *

Back to top button