ಸಿಂಘು ಗಡಿಯಲ್ಲಿ ಯುವಕನ ಭಯಾನಕ ಹತ್ಯೆ; ಇಬ್ಬರ ಬಂಧನ
ನವದೆಹಲಿ: ರೈತ ಹೋರಾಟದ ತಾಣವಾಗಿರುವ ಸಿಂಘು ಗಡಿಯಲ್ಲಿ ದಲಿತ ವರ್ಗಕ್ಕೆ ಸೇರಿದ ಕಾರ್ಮಿಕ ಲಖ್ಬೀರ್ (35) ಎಂಬ ಯುವಕನ ಎಡಗಾಲು ಮತ್ತು ಎಡಗೈಯನ್ನು ತುಂಡರಿಸಿ ಭಯಾನಕವಾಗಿ ಹತ್ಯೆ ಮಾಡಿ ಶವವನ್ನು ಪೊಲೀಸ್ ಬ್ಯಾರಿಕೇಡ್ ಗೆ ಕಟ್ಟಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿಹಾಂಗ್ ಸಿಖ್ ಪಂಥದ ಸರ್ವಜಿತ್ ಸಿಂಗ್ ಹಾಗೂ ಇನ್ನೋರ್ವ ಆರೋಪಿಯನ್ನು ಪಂಜಾಬಿನ ಅಮೃತಸರ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಸರ್ವಜಿತ್ ಸಿಂಗ್ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ತಾನು ಈ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲವೆಂದು ಹೇಳಿಕೊಂಡಿದ್ದಾನೆ.
ಸಿಖ್ ಧರ್ಮದ ಪವಿತ್ರ ಗ್ರಂಥವನ್ನು ಲಖ್ಬೀರ್ ಅವಮಾನಿಸಿದ್ದ ಎಂದು ಕೆಲ ನಿಹಾಂಗ್ ಸಿಖ್ಖರು ಆರೋಪಿಸಿದ್ದಾರೆ. ಇನ್ನು ಗಲಭೆ ಸೃಷ್ಟಿಸುವ ಉದ್ದೇಶದಿಂದ ಗ್ರಂಥವನ್ನು ಅವಮಾನಿಸುವಂತೆ ಲಖ್ಬೀರ್ ಗೆ ಆಮಿಷವೊಡ್ಡಲಾಗಿತ್ತು ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಕಠಿಣ ಶಿಕ್ಷೆ ವಿಧಿಸುವಂತೆ ದಲಿತ ಸಂಘಟನೆಗಳ ಆಗ್ರಹ:
ಸಿಂಘು ಗಡಿಯಲ್ಲಿ ದಲಿತ ಯುವಕ ಲಖ್ಬೀರ್ ಸಿಂಗ್ ಎಂಬವರನ್ನು ಭಯಾನಕವಾಗಿ ಹತ್ಯೆ ಮಾಡಿರುವ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಲವು ದಲಿತ ಸಂಘಟನೆಗಳು ರಾಷ್ಟ್ರೀಯ ಪರಿಶಿಷ್ಠ ಜಾತಿ ಆಯೋಗಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿವೆ.
ದಲಿತ ವ್ಯಕ್ತಿಯ ಹತ್ಯೆಯ ಹಿಂದೆ ಯಾವುದೋ ಷಡ್ಯಂತ್ರ ಅಡಗಿದ್ದು, ಈ ಕೃತ್ಯದ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು. ಹಂತಕರಿಗೆ ಹಾಗೂ ಷಡ್ಯಂತ್ರ ರೂಪಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬೆರ್ವಾ ವಿಕಾಸ್, ಕತಿಕ್ ಸಮಾಜ್, ಧನಕ್ ವೆಲ್ಫೇರ್ ಅಸೋಸಿಯೇಷನ್ ಸಹಿತ ಹತ್ತಾರು ಸಂಘಟನೆಗಳು ಆಗ್ರಹಿಸಿವೆ.