Breaking NewsLatest

ಅದಾನಿ ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಸರ್ಕಾರದ ಮೌನ ಏಕೆ: ಎಐಸಿಸಿ ವಕ್ತಾರೆ ಸುಪ್ರಿಯಾ ಪ್ರಶ್ನೆ

ಬೆಂಗಳೂರು: ಅದಾನಿ ಮುಂದ್ರಾ ಅವರ ಬಂದರಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ಸರ್ಕಾರ ಮೌನ ವಹಿಸಿರುವುದೇಕೆ? ಇದು ದೇಶದ ಭದ್ರತೆಗೆ ಅಪಾಯ ತರುವ ವಿಚಾರವಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನೇಟ್ ಅವರು, ‘ಅದಾನಿ ಮುಂದ್ರಾ ಬಂದರಿನಲ್ಲಿ ಈ ರೀತಿ ಡ್ರಗ್ಸ್ ಪತ್ತೆ ಪ್ರಕರಣ ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಡ್ರಗ್ಸ್ ಪತ್ತೆಯಾಗಿದ್ದು, ಆದರೂ ಬಂದರು ನಡೆಸುತ್ತಿರುವ ಅದಾನಿ ಸಮೂಹದ ವಿಚಾರಣೆ ನಡೆಸಿಲ್ಲ ಯಾಕೆ’ ಎಂದು ಪ್ರಶ್ನಿಸಿದರು.

‘ಕೆಲ ದಿನಗಳ ಹಿಂದೆ ಗುಜರಾತಿನ ಅದಾನಿ ಮುಂದ್ರಾ ಬಂದರಿನಲ್ಲಿ 3000 ಕೆ.ಜಿ ಅಂದರೆ 21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ಕಳೆದ ಜೂನ್ ತಿಂಗಳಲ್ಲಿ 25,000 ಕೆ.ಜಿಯಷ್ಟು ಡ್ರಗ್ಸ್ ಬಂದಿದ್ದು, ಅದು ಈಗಾಗಲೇ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿವೆ. ಇದನ್ನು ಸೆಮಿ ಕಟ್ ಟಾಲ್ಕಮ್ ಪೌಡರ್ ಎಂದು ಹೆಸರಿಸಲಾಗಿದ್ದು, ಈ ಡ್ರಗ್ಸ್ ಗಳು ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಆಶಿ ಟ್ರೇಡಿಂಗ್ ಕಂಪನಿ ಆಮದು ಮಾಡಿಕೊಂಡಿದೆ. ಇದು ದೇಶದ ಯುವಕರ ಭವಿಷ್ಯದ ವಿಷಯವಾಗಿದೆ. ಆದರೂ ಈ ವಿಚಾರವಾಗಿ ನರೇಂದ್ರ ಮೋದಿ ಅವರ ಸರ್ಕಾರವಾಗಲಿ, ದೇಶದ ಪ್ರಮುಖ ಮಾಧ್ಯಮಗಳಾಗಲಿ ಮಾತನಾಡುತ್ತಿಲ್ಲ’ ಎಂದು ತಿಳಿಸಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿ ಟ್ರೇಡಿಂಗ್ ಕಂಪನಿ ಮಾಲೀಕರಾದ ಸುಧಾಕರ್ ಮಚ್ವರಮ್ ಹಾಗೂ ಅವರ ಪತ್ನಿ ಗವಿಂದ ರಾಜು ವೈಶಾಲಿ ಅವರನ್ನು ಬಂಧಿಸಲಾಗಿದ್ದು, ಇಂತಹ ಸಣ್ಣ ಟ್ರೇಡಿಂಗ್ ಕಂಪನಿ ಇಷ್ಟು ದೊಡ್ಡ ಮೊತ್ತದ ಡ್ರಗ್ಸ್ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಪ್ರಭಾವಿಗಳ ಕೈವಾಡದ ಶಂಕೆ ಇದ್ದು, ಅದು ಯಾರು ಎಂಬುದರ ಬಗ್ಗೆ ತನಿಖೆ ನಡೆದಿಲ್ಲ. ಜೂನ್ ತಿಂಗಳಲ್ಲಿ ಅಫ್ಘಾನಿಸ್ತಾನದ ಹಸನ್ ಹುಸೇನ್ ಲಿಮಿಟೆಡ್ ಕಂಪನಿ 25 ಸಾವಿರ ಕೆ.ಜಿ ಅಂದರೆ 1.75 ಲಕ್ಷ ಕೋಟಿಯಷ್ಟು ಮೊತ್ತದ ಹೆರಾಯಿನ್ ರಫ್ತು ಮಾಡಿದ್ದು, ಅದು ದೇಶದ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿದೆ. ಇದು ದೇಶದ ಲಕ್ಷಾಂತರ ಯುವಕರು ಮಾದಕ ವ್ಯಸನಿಗಳಾಗುವ ಸ್ಥಿತಿ ನಿರ್ಮಾಣವಾಗಿದೆ. ಆ ಮೂಲಕ ಇದು ದೇಶದ ಭದ್ರತೆಗೆ ಮಾರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

Related Articles

Leave a Reply

Your email address will not be published.

Back to top button