Breaking NewsLatest

ರೈತರ ಬೇಡಿಕೆ ಈಡೇರಿಸದಿದ್ದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಲು ಸಾಧ್ಯವಿಲ್ಲ: ಮೇಘಾಲಯ ಗವರ್ನರ್

ಜೈಪುರ್: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮೇಘಾಲಯ ಗವರ್ನರ್ ಸತ್ಯಪಾಲ್ ಮಲಿಕ್ ಅಚ್ಚರಿ ಮೂಡಿಸಿದ್ದಾರೆ.

ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಮನ ಹರಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜಸ್ತಾನದ ಜುನ್​ಜುನೂ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.

ಪಶ್ಚಿಮ ಉತ್ತರ ಪ್ರದೇಶದ ಜಾಟ್ ಸಮುದಾಯದ ನಾಯಕರಾಗಿರುವ ಸತ್ಯಪಾಲ್ ಮಲಿಕ್, ಬಿಜೆಪಿ ನಾಯಕರ ನಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಅದೆಷ್ಟೋ ಹಳ್ಳಿಗಳೊಳಗೆ ಬಿಜೆಪಿ ನಾಯಕರು ಈವರೆಗೆ ಕಾಲನ್ನೂ ಇಟ್ಟಿಲ್ಲ. ನಾನು ಮೀರತ್​ನವನು. ನನ್ನ ಜಿಲ್ಲೆಯಲ್ಲಿನ ಹಳ್ಳಿಗಳಿಗೆ ಯಾವ ಬಿಜೆಪಿ ನಾಯಕನೂ ಬಂದಿಲ್ಲ. ಮೀರತ್, ಮುಜಾಫರ್​ನಗರ್, ಬಾಘ್ಪತ್​ಗೆ ಬಿಜೆಪಿ ನಾಯಕರು ಕಾಲಿಟ್ಟಿಲ್ಲ ಎಂದು ಮಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರ ಜೊತೆಗೆ ನಿಲ್ಲಲು ಹುದ್ದೆ ತ್ಯಜಿಸುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲಿಕ್, ನಾನು ರೈತರೊಂದಿಗಿದ್ದೇನೆ. ಹುದ್ದೆ ಬಿಡುವ ಅಗತ್ಯವಿಲ್ಲ. ಒಂದು ವೇಳೆ ಅಂಥ ಸಂದರ್ಭ ಬಂದಲ್ಲಿ ಹುದ್ದೆ ಬಿಡಲೂ ಸಿದ್ಧ ಎಂದರು.

ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವರ ಜೊತೆ ನಾನು ಜಗಳವಾಡಿದ್ದೇನೆ. ರೈತರ ಪರವಹಿಸಿ ಪ್ರಧಾನಿ, ಗೃಹಮಂತ್ರಿ ಹೀಗೆ ಪ್ರತಿಯೊಬ್ಬರ ಜೊತೆಗೂ ಜಗಳವಾಡಿದ್ದೇನೆ. ನೀವೆಲ್ಲ ತಪ್ಪು ಮಾಡುತ್ತಿದ್ದೀರಿ, ಹೀಗೆ ಮಾಡಬೇಡಿ ಎಂದು ಎಚ್ಚರಿಸಿದ್ದೇನೆ ಎಂದರು.

ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಕಾನೂನಾತ್ಮಕವಾಗಿ ಸರ್ಕಾರ ಖಚಿತಪಡಿಸಿದ್ದರೆ ಈ ಸಮಸ್ಯೆ ಬಗೆಹರಿದುಬಿಡುತ್ತಿತ್ತು. ಮೂರು ಕೃಷಿ ಕಾಯ್ದೆಗಳನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿರುವುದರಿಂದ ರೈತರು ಈ ವಿಚಾರವನ್ನು ಅಲ್ಲಿಗೇ ಬಿಡುತ್ತಿದ್ದರು. ಈಗಿರುವುದು ಕನಿಷ್ಠ ಬೆಂಬಲ ಬೆಲೆ ವಿಚಾರವಷ್ಟೆ. ಅದೊಂದನ್ನೂ ನೀವು ಮಾಡುತ್ತಿಲ್ಲ ಎಂದು ಸರ್ಕಾರದ ಬಗ್ಗೆ ತಕರಾರೆತ್ತಿರುವ ಮಲಿಕ್, ಕನಿಷ್ಠ ಬೆಂಬಲ ಬೆಲೆ ವಿಚಾರ ಬಗೆಹರಿಯದೆ ಯಾವುದೂ ಬಗೆಹರಿಯಲಾರದು ಎಂದಿದ್ದಾರೆ.

ಪ್ರಧಾನಿಗೆ ಸಾರ್ವಜನಿಕವಾಗಿ ನಾನು ಯಾವುದೇ ಸಂದೇಶವನ್ನು ಕೊಡಲಾರೆ. ಆದರೆ ಈ ವಿಚಾರವಾಗಿ ವೈಯಕ್ತಿಕವಾಗಿ ನನ್ನ ವಿಚಾರವನ್ನು ಹೇಳುವೆ. ಸರ್ಕಾರ ಬಯಸಿದಲ್ಲಿ ರೈತರು ಮತ್ತು ಸರ್ಕಾರದ ನಡುವೆ ಸಂಧಾನಕ್ಕೂ ಸಿದ್ಧವಿರುವುದಾಗಿ ಮಲಿಕ್ ಹೇಳಿದರು.

ಈ ವರ್ಷದ ಆರಂಭದಲ್ಲಿಯೇ ರೈತರ ಪರವಾಗಿ ಧ್ವನಿಯೆತ್ತಿದ್ದ ಮಲಿಕ್, ರೈತರನ್ನು ಅವಮಾನಿಸುವುದು ಕೂಡದು ಎಂದಿದ್ದರು. ರೈತರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button