ಬಿಜೆಪಿ ವಿರುದ್ಧ ಒಗ್ಗೂಡಿ; ಮೊದಲ ಗೋವಾ ಭೇಟಿಗೆ ಮುನ್ನ ಪ್ರತಿಪಕ್ಷಗಳಿಗೆ ಮಮತಾ ಕರೆ
ಕೋಲ್ಕತ್ತಾ: ಮುಂದಿನ ವಾರ ಗೋವಾಕ್ಕೆ ಮೊದಲ ಭೇಟಿ ನೀಡಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬೆಂಲ ನೀಡುವಂತೆ ಮನವಿ ಮಾಡಿಕೊಂಡು ಪ್ರತಿಪಕ್ಷಗಳಿಗೆ ಸಂದೇಶ ಕಳಿಸಿದ್ದಾರೆ.
40 ಸದಸ್ಯರುಗಳ ಗೋವಾ ವಿಧಾನಸಭೆಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ.
ಮುಂದಿನ ವಾರ ನಾನು ಗೋವಾಕ್ಕೆ ಭೇಟಿ ನೀಡುತ್ತಿದ್ದು, ಬಿಜೆಪಿ ಮತ್ತದರ ಒಡೆದು ಆಳುವ ನೀತಿಯನ್ನು ಮಣಿಸುವ ಹೋರಾಟದಲ್ಲಿ ಜೊತೆಯಾಗುವಂತೆ ಎಲ್ಲ ವ್ಯಕ್ತಿಗಳು, ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳನ್ನು ಕೇಳಿಕೊಳ್ಳುತ್ತಿದ್ದೇನೆ. ಕಳೆದ 10 ವರ್ಷಗಳಲ್ಲಿ ಗೋವಾ ಜನತೆ ಬಹಳ ನೊಂದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಹೇಳಿದ್ದಾರೆ.
ಒಗ್ಗೂಡುವ ಮೂಲಕ, ಗೋವಾದಲ್ಲಿ ಜನರದ್ದೇ ಆದ ಮತ್ತು ಅವರ ಆಶೋತ್ತರಗಳನ್ನು ಈಡೇರಿಸಬಲ್ಲ ಹೊಸ ಸರ್ಕಾರವನ್ನು ರಚಿಸಿ, ಹೊಸ ಪರ್ವಕ್ಕೆ ನಾಂದಿ ಹಾಡಲು ಸಾಧ್ಯ ಎಂದು ಅವರು ಆಶಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದ ಬಳಿಕ ತೃಣಮೂಲ ಕಾಂಗ್ರೆಸ್ ತನ್ನ ಪ್ರಭಾವವನ್ನು ರಾಷ್ಟ್ರ ಮಟ್ಟದಲ್ಲಿ ವಿಸ್ತರಿಸಿಕೊಳ್ಳುವ ಯತ್ನದಲ್ಲಿದೆ. ಮಾತ್ರವಲ್ಲದೆ, ಬಿಜೆಪಿ ಆಡಳಿತವಿರುವ ಗೋವಾ ಮತ್ತು ತ್ರಿಪುರಾಗಳಲ್ಲಿ ತನ್ನದೇ ದಾರಿಗಳನ್ನು ಕಂಡುಕೊಂಡಿದೆ.ಗೋವಾ ಮಾಜಿ ಸಿಎಂ, ಕಾಂಗ್ರೆಸ್ ನಾಯಕ 40ರ ಹರೆಯದ ಲುಝಿನೊ ಫೆಲಿರಿಯೊ ಇತ್ತೀಚೆಗೆ ಟಿಎಂಸಿಗೆ ಸೇರಿದ್ದನ್ನು ಇಲ್ಲಿ ನೆನೆಯಬೇಕು. ಗೋವಾದಲ್ಲಿ ಚುನಾವಣೆಗೆ ಸ್ಪರ್ಧಿಸುವ ತನ್ನ ನಿರ್ಧಾರ ಪ್ರಕಟಿಸುವುದಕ್ಕೂ ಮೊದಲು ಟಿಎಂಸಿ ಹಲವು ಸ್ಥಳೀಯ ನಾಯಕರನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಂಡಿದೆ.
ಬಿಜೆಪಿ ವಿರುದ್ಧ ನಿಲ್ಲಬಲ್ಲ ಸಮರ್ಥ ಪಕ್ಷವೆಂದು ಟಿಎಂಸಿ ಈಗಾಗಲೇ ತನ್ನನ್ನು ತಾನು ಬಿಂಬಿಸಕೊಂಡಿದೆ.