ಪೆಟ್ರೋಲ್ ಬೆಲೆ ಕಡಿತ ಒಂದು ನಾಟಕ; ಲಾಲೂ ಟೀಕೆ
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕಡಿತ ಘೋಷಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ನಾಟಕ ಎಂದು ರಾಷ್ಟ್ರೀಯ ಜನತಾ ದಳ ನಾಯಕ ಲಾಲೂ ಪ್ರಸಾದ್ ಯಾದವ್ ಟೀಕಿಸಿದ್ದಾರೆ.
ಇದು ಜನರ ಪಾಲಿಗೆ ನಿರಾಳವೇನಲ್ಲ. ಉತ್ರ ಪ್ರದೇಶ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಮತ್ತೆ ಬೆಲೆ ಏರಿಕೆಯಾಗಲಿದೆ ಎಂದು ಲಾಲೂ ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಅಸಮರ್ಪಕ ಎಂದೂ ಅವರು ಹೇಳಿದ್ದಾರೆ.
ಮೋದಿ ಸರ್ಕಾರ ಪೆಟ್ರೋಲ್ ಬೆಲೆ ಕಡಿತದ ನಾಟಕ ಮಾಎಉತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿ ಲೀಟರ್ಗೆ ರೂ. 50ರಷ್ಟು ಬೆಲೆ ಇಳಿಕೆಯಾದರೆ ಅದೊಂದು ರೀತಿಯಲ್ಲಿ ಜನತೆಯ ಪಾಲಿಗೆ ನಿರಾಳವಾದೀತು. ಯುಪಿ ಚುನಾವಣೆಯ ನಂತರ ಪೆಟ್ರೋಲಿಯಂ ಬೆಲೆಯನ್ನು ಮತ್ತೆ ಹೆಚ್ಚಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಆರ್ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪೆಟ್ರೋಲ್ ಬೆಲೆಯನ್ನು ಲೀಟರ್ಗೆ ರೂ. 70ಕ್ಕಿಂತ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೊದಲು ಲೀಟರ್ ಪೆಟ್ರೋಲ್ ಬೆಲೆ 70ನ್ನೇ ದುಬಾರಿ ಎಂದು ಭಾವಿಸಿದ್ದ ಬಿಜೆಪಿ ಈಗ 100ಕ್ಕಿಂತ ಹೆಚ್ಚು ಏರಿಕೆ ಮಾಡಿದೆ ಎಂದು ಟೀಕಿಸಿದ ಅವರು, ಕನಿಷ್ಠ 70ಕ್ಕೆ ಪೆಟ್ರೋಲ್ ಬೆಲೆ ಇಳಿಯಬೇಕು ಎಂದಿದ್ದಾರೆ.