ಲಖೀಂಪುರ ರೈತರ ಹತ್ಯೆ: ಮಂತ್ರಿ ಅಜಯ್ ಮಿಶ್ರಾ ವಜಾಕ್ಕೆ ಒತ್ತಾಯಿಸಿ ರೈತರಿಂದ ರೈಲ್ ರೋಕೋ
ನವದೆಹಲಿ: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ರೈಲ್ ರೋಕೊ ನಡೆಸುತ್ತಿದೆ.
ರೈತರ ಮೇಲೆ ಕಾರು ಹರಿಸಿ ಕೊಲೆಗೈದ ಪ್ರಕರಣದಲ್ಲಿ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು, ಈಗಾಗಲೇ ಬಂಧನಕ್ಕೊಳಗಾಗಿದ್ದಾನೆ. ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕೆಂಬುದು ರೈತರ ಆಗ್ರಹವಾಗಿದೆ.
ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ರೈಲ್ ರೋಕೊಗೆ ಕರೆ ನೀಡಿದ್ದು, ಸಂಜೆ 4ರವರೆಗೆ ದೇಶದೆಲ್ಲೆಡೆ ರೈತರು ರೈಲು ತಡೆ ಹೋರಾಟ ನಡೆಸಲಿದ್ದಾರೆ. ಪ್ರತಿಭಟನೆ ಶಾಂತಿಯುತವಾಗಿರುವಂತೆ ನೋಡಿಕೊಳ್ಳಬೇಕೆಂದೂ, ಪ್ರತಿಭಟನೆ ವೇಳೆ ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವಂತೆಯೂ ಹೇಳಿಕೆಯಲ್ಲಿ ರೈತರನ್ನು ವಿನಂತಿಸಲಾಗಿದೆ.
ಲಖೀಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರೂ ಸೇರಿ 8 ಜನರು ಮೃತಪಟ್ಟಿದ್ದರು. ರೈತರ ಮೇಲೆ ಹರಿಸಲಾದ ಕಾರಿನಲ್ಲಿ ಕೇಂದ್ರ ಮಂತ್ರಿ ಅಜಯ್ ಮಿಶ್ರಾ, ಪುತ್ರ ಆಶಿಶ್ ಮಿಶ್ರಾ ಮತ್ತಿತರರು ಇದ್ದರೆಂದು ರೈತರು ಆರೋಪಿಸಿದ್ದಾರೆ. ಘಟನೆ ಸಂಬಂಧ ಈವರೆಗೆ ಆಶಿಶ್ ಮಿಶ್ರಾ ಸೇರಿ ಮೂವರನ್ನು ಬಂಧಿಸಲಾಗಿದೆ.