Breaking NewsLatest
ಮೋದಿ ವಿರುದ್ಧದ ಟ್ವೀಟ್ ಡಿಲೀಟ್ ಮಾಡಿದ ರಾಜ್ಯ ಕಾಂಗ್ರೆಸ್
ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಹೆಬ್ಬೆಟ್ ಗಿರಾಕಿ ಎಂದು ಟೀಕಿಸಿ ಮಾಡಿದ್ದ ಟ್ವೀಟ್ನ್ನು ಕರ್ನಾಟಕ ಕಾಂಗ್ರೆಸ್ ಅಳಿಸಿಹಾಕಿದೆ. ಈ ವಿವಾದಾತ್ಮಕ ಪೋಸ್ಟ್ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದು ಸಾಮಾಜಿಕ ಜಾಲತಾಣ ವಿಭಾಗದ ಅನನುಭವಿಗಳಿಂದ ಆಗಿರುವ ಪ್ರಮಾದ ಎಂದಿದ್ದಾರೆ.
ಟ್ವೀಟ್ನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿರುವ ಡಿಕೆ ಶಿವಕುಮಾರ್, ನಾನು ನಾಗರಿಕ ಮತ್ತು ಸಂಸದೀಯ ಭಾಷೆಯ ಮೇಲೆ ನಂಬಿಕೆ ಉಳ್ಳವನು ಎಂದಿದ್ದಾರೆ.
ಈಗ ಅಳಿಸಲಾಗಿರುವ ಟ್ವೀಟ್ನಲ್ಲಿ ಕೆಪಿಸಿಸಿ, ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ವಾಗ್ದಾಳಿ ಮಾಡಿತ್ತು. ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು. ಆದರೆ ಮೋದಿ ಓದಲಿಲ್ಲ. ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು. ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ ಎಂದು ಆ ಟ್ವೀಟ್ನಲ್ಲಿ ಕಾಂಗ್ರೆಸ್ ಟೀಕಿಸಿತ್ತು.