Breaking NewsLatest

ಅಮೆರಿಕದಲ್ಲೂ ಕನ್ನಡ ಹಬ್ಬ; ಜಾರ್ಜಿಯಾದಲ್ಲಿ ನವೆಂಬರ್ 1 ಕನ್ನಡ ಭಾಷಾ ದಿನವೆಂದು ಘೋಷಣೆ

ಬೆಂಗಳೂರು: ಅಮೆರಿಕದ ಜಾರ್ಜಿಯಾ ಸ್ಟೇಟ್ ವ್ಯಾಪ್ತಿಯಲ್ಲಿ ಕನ್ನಡಿಗರು ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದು, ಅಲ್ಲಿನ ಆಡಳಿತವು ಕನ್ನಡಿಗರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ನವೆಂಬರ್ 1ರಂದು ಕನ್ನಡ ಭಾಷೆ ಹಾಗೂ ರಾಜ್ಯೋತ್ಸವದ ದಿನವನ್ನಾಗಿ ಘೋಷಿಸಿರುವುದು ವರದಿಯಾಗಿದೆ.

ನೃಪತುಂಗ ಕನ್ನಡ ಕೂಟ ಎನ್ನುವ ಬ್ಯಾನರ್ ಅಡಿಯಲ್ಲಿ ಕನ್ನಡಿಗರು ಈ ಕುರಿತಾಗಿ ಬೇಡಿಕೆಯಿಟ್ಟಿದ್ದರು. ಪ್ರತಿಫಲವಾಗಿ ಜಾರ್ಜಿಯಾ ಗವರ್ನರ್ ಬ್ರಿಯಾನ್ ಪಿ ಕೆಂಪ್ ಅವರು ಸಹಿ ಹಾಕಿರುವ ಘೋಷಣೆ ಪ್ರಕಟವಾಗಿದೆ.

ಕನ್ನಡ ಭಾಷೆಯನ್ನು ಗುರುತಿಸಲು ಮತ್ತು ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಲು ಕಳೆದ ಕೆಲವು ವರ್ಷಗಳಿಂದ ನೃಪತುಂಗ ಕನ್ನಡ ಕೂಟವು ಜಾರ್ಜಿಯಾ ರಾಜ್ಯ ಅಧಿಕಾರಿಗಳನ್ನು ಒತ್ತಾಯಿಸುತ್ತಾ ಬಂದಿದೆ.

ಜಾರ್ಜಿಯಾ ಸ್ಟೇಟಿನಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕನ್ನಡ ಮಾತನಾಡುವ ಕುಟುಂಬಗಳು ನೆಲೆಸಿವೆ. ನೃಪತುಂಗ ಕನ್ನಡ ಕೂಟವು ಸುಮಾರು 500 ಸದಸ್ಯರನ್ನು ಹೊಂದಿದೆ. ಕಳೆದ ಐದು ದಶಕಗಳಿಂದ ಈ ಪ್ರದೇಶದಲ್ಲಿ ಅತ್ಯಂತ ಸಕ್ರಿಯವಾದ ಭಾಷಾ ಮತ್ತು ಸಾಂಸ್ಕೃತಿಕ ಗುಂಪಾಗಿ ಗುರುತಿಸಿಕೊಂಡಿದೆ.

ಅಮೆರಿಕದ ಸ್ಟೇಟ್ವೊಂದರಲ್ಲಿ ಕನ್ನಡ ಭಾಷೆಗೆ ಗೌರವ ಸಿಕ್ಕಿರುವುದು ಇದೇ ಮೊದಲು. ವಿಶ್ವದೆಲ್ಲಡೆ ಇರುವ ಕನ್ನಡಿಗರು ಹೆಮ್ಮೆಪಡುವಂತಹ ಸಂಗತಿಯಾಗಿದೆ. ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಇದೊಂದು ದೊಡ್ಡ ಗೆಲುವು” ಎಂದು ನೃಪತುಂಗ ಕನ್ನಡ ಕೂಟದ ಸದಸ್ಯ ಹಾಗೂ ಹಿರಿಯ ಡೇಟಾ ಅನಾಲಿಟಿಕ್ಸ್ ವ್ಯವಸ್ಥಾಪಕ ಭರತ್ ತೇಜಸ್ವಿ ತಿಳಿಸಿದ್ದಾರೆ.

ಕನ್ನಡಿಗರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಾಗೆಯೇ ಜಾರ್ಜಿಯಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ಕೃಷ್ಟಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗವರ್ನರ್ ಕೆಂಪ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button