Breaking NewsLatest

ಆರ್ಯನ್ ಖಾನ್ ಕೇಸ್: ವಿವಾದಿತ ಸಾಕ್ಷಿ ಗೋಸವಿ ಪುಣೆಯಲ್ಲಿ ಬಂಧನ

ಮುಂಬೈ: ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನವಾದಂದಿನಿಂದಲೂ ವಿವಾದದ ಸುಳಿಯಲ್ಲಿರುವ ಎನ್​ಸಿಬಿಯ ಸ್ವತಂತ್ರ ಸಾಕ್ಷಿ ಕಿರಣ್ ಗೋಸವಿಯನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರಿಗೆ ಶರಣಾಗುವುದಾಗಿ ಆತ ಹೇಳಿದ್ದ ಮೂರು ದಿನದ ಬಳಿಕ ಈ ಬಂಧನವಾಗಿದೆ.

2018ರ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆತನ ವಿರುದ್ಧ ಲುಕ್​ಔಟ್ ನೊಟೀಸ್ ಜಾರಿಯಾಗಿತ್ತು. ಮಹಾರಾಷ್ಟ್ರದಲ್ಲಿ ತನಗೆ ಬೆದರಿಕೆಯಿರುವುದರಿಂದ ಉತ್ತರ ಪ್ರದೇಶ ಪೊಲೀಸರೆದುರು ಶರಣಾಗುವುದಾಗಿ ಆತ ಹೇಳಿಕೊಂಡಿದ್ದ. ಆತ ತಮ್ಮೆದುರು ಶರಣಾಗುವಂತೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂಬ ತಮ್ಮ ವಿರುದ್ಧದ ಆರೋಪವನ್ನು ಲಕ್ನೋ ಪೊಲೀಸರು ನಿರಾಕರಿಸಿದ್ದರು.

ಮುಂಬೈನಲ್ಲಿ ಕ್ರೂಸ್ ಮೇಲೆ ಎನ್​ಸಿಬಿ ದಾಳಿ ನಡೆದ ವೇಳೆ ಈ ಗೋಸವಿ, ಆರ್ಯನ್ ಜೊತೆಗೆ ಇದ್ದನೆನ್ನಲಾಗಿದೆ. ಆರ್ಯನ್ ಖಾನ್ ಜೊತೆಗಿನ ಸೆಲ್ಫೀ ಮತ್ತು ವಿಡಿಯೋ ಈತ ಯಾರೆಂಬ ಪ್ರಶ್ನೆಯೇಳಲು ಕಾರಣವಾಗಿದ್ದವು. ಆಗ ಈತನನ್ನು ಖಾಸಗಿ ಪತ್ತೇದಾರಿ ಎಂದು ಬಿಂಬಿಸಲಾಗಿತ್ತು. ಎನ್​ಸಿಬಿ ದಾಳಿ ವೇಳೆ ಖಾಸಗಿ ಪತ್ತೇದಾರನೇಕೆ ಎಂಬ ಅನುಮಾನಗಳಿಗೂ ಇದು ಎಡೆ ಮಾಡಿಕೊಟ್ಟಿತ್ತು.

ಗೋಸವಿಯ ಅಂಗರಕ್ಷಕನೆನ್ನಲಾದ ಪ್ರಭಾಕರ್ ಸೈಲ್ ಭಾನುವಾರ ಈತನ ವಿರುದ್ಧ ಲಂಚದ ಆರೋಪ ಮಾಡಿದ್ದ. ಗೋಸವಿ ಮತ್ತು ಸ್ಯಾಮ್ ಡಿಸೋಜ ನಡುವಿನ ಫೋನ್ ಸಂಭಾಷಣೆಯನ್ನು ತಾನು ಕೇಳಿಸಿಕೊಂಡಿದ್ದು, 25 ಕೋಟಿ ಬೇಡಿಕೆ ಬಳಿಕ 15 ಕೋಟಿಗೆ ವ್ಯವಹಾರ ಕುದುರಿಸಿದ್ದು, ಅದರಲ್ಲಿ 8 ಕೋಟಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗಾಗಿ ಎಂಬ ಮಾತುಕತೆ ನಡೆದಿತ್ತೆಂದು ಸೈಲ್ ಆರೋಪಿಸಿದ್ದ.

Related Articles

Leave a Reply

Your email address will not be published. Required fields are marked *

Back to top button