KSET Result 2021: ಕೆ-ಸೆಟ್ ಫಲಿತಾಂಶ ಪ್ರಕಟ: ಪುರುಷ ಅಭ್ಯರ್ಥಿಗಳೇ ಮೇಲುಗೈ
ಮೈಸೂರು: ಈ ಸಾಲಿನ ಕೆಸೆಟ್ ಪರೀಕ್ಷೆಯಲ್ಲಿ 4,779 ಮಂದಿ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮೈಸೂರು ವಿವಿಯ ಕ್ರಾಫರ್ಡ್ ಭವನದ ಅಕಾಡೆಮಿಕ್ ಕೌನ್ಸಿಲ್ ಮಾತನಾಡಿದ ಅವರು, ಕೆ-ಸೆಟ್ ಪರೀಕ್ಷೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದ 4,779 ಅಭ್ಯರ್ಥಿಗಳಲ್ಲಿ, 2,470 ಪುರುಷ ಅಭ್ಯರ್ಥಿಗಳು, 2309 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಈ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ವಿಶ್ವವಿದ್ಯಾನಿಲಯಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹತೆಯನ್ನು ಪಡೆದಿದ್ದಾರೆ ಎಂದು ಹೇಳಿದರು. ಕೆ-ಸೆಟ್ ಪರೀಕ್ಷೆಯನ್ನು ಜುಲೈ 25 ರಂದು 41 ವಿಷಯಗಳಲ್ಲಿ ಹಾಗೂ ಕರ್ನಾಟಕದ 11 ನೋಡಲ್ ಕೇಂದ್ರಗಳಲ್ಲಿ ನಡೆಸಲಾಗಿತ್ತು.
ಕೆ-ಸೆಟ್ ಪರೀಕ್ಷೆಗೆ ಒಟ್ಟು 83,907 ಅಭ್ಯರ್ಥಿಗಳು ಅರ್ಜಿಯ ಮೂಲಕ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 69,857 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪತ್ರಿಕೆ-1 ಮತ್ತು ಪತ್ರಿಕೆ -2ರಲ್ಲೂ ಹಾಜರಾಗಿ, ಸಾಮಾನ್ಯ ವರ್ಗದ ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಒಟ್ಟು ಶೇ.40 ಅಂಕಗಳು ಮತ್ತು ಮೀಸಲಾತಿ ವ್ಯಾಪ್ತಿಗೆ ಬರುವ ಪ.ಜಾ/ ಪ.ಪಂ, ಇತರೆ ಹಿಂದುಳಿದ ವರ್ಗ ಮತ್ತು ವಿಕಲಚೇತನ ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಒಟ್ಟು ಶೇ.35 ಅಂಕಗಳನ್ನು ಗಳಿಸಬೇಕಾಗಿತ್ತು.
ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ಅರ್ಹತೆ ಪಡೆದ ಅಭ್ಯರ್ಥಿಗಳ ಸಂಖ್ಯೆ ಕೆ-ಸೆಟ್ನ ಎರಡು ಪತ್ರಿಕೆಗಳಲ್ಲಿ ಹಾಜರಾದ ಶೇ.6 ಅಭ್ಯರ್ಥಿಗಳ ಸಂಖ್ಯೆಗೆ ಸಮನಾಗಿರುತ್ತದೆ ಎಂದರು. ವಿಷಯಾವಾರು ತೇರ್ಗಡೆಯಾದ ಅಭ್ಯರ್ಥಿಗಳ ಸಂಖ್ಯೆ ಹೀಗಿದೆ.
ವಾಣಿಜ್ಯ-888, ಕನ್ನಡ 397, ಅರ್ಥಶಾಸ್ತ್ರ 308, ಇಂಗ್ಲಿಷ್ 306, ಪೊಲಿಟಿಕಲ್ ಸೈನ್ಸ್ 378, ಇತಿಹಾಸ 325, ಸಮಾಜಶಾಸ್ತ್ರ 139, ಭೂಗೋಳ ಶಾಸ್ತ್ರ 25, ಹಿಂದಿ 23, ಮ್ಯಾನೇಜ್ ಮೆಂಟ್ 191, ಪ್ರವಾಸೋದ್ಯಮ ಆಡಳಿತ 5, ಶಿಕ್ಷಣ 88, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ 56, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ 20, ಮನಃಶಾಸ್ತ್ರ 19, ಸೋಷಿಯಲ್ ವರ್ಕ್ 82, ಅಪರಾಧ ಶಾಸ್ತ್ರ 3, ಕಾನೂನು 27, ಸಂಸ್ಕೃತ 10, ದೈಹಿಕ ಶಿಕ್ಷಣ 98, ಜಾನಪದ ಸಾಹಿತ್ಯ 6, ಉರ್ದು 14, ಸಾರ್ವಜನಿಕ ಆಡಳಿತ 7, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಅಪ್ಲಿಕೇಶನ್ 151, ದೈಹಿಕ ವಿಜ್ಞಾನ 105, ಗಣಿತ ವಿಜ್ಞಾನ 106, ರಸಾಯನ ವಿಜ್ಞಾನ 312, ಜೀವನ ವಿಜ್ಞಾನ 584, ಪರಿಸರ ವಿಜ್ಞಾನ 17, ಗೃಹ ವಿಜ್ಞಾನ 19, ವಿದ್ಯುನ್ಮಾನ ವಿಜ್ಞಾನ 24, ಭೂ ವಿಜ್ಞಾನ 12, ಪುರಾತತ್ವ ಶಾಸ್ತ್ರ 2, ಮಾನವ ಶಾಸ್ತ್ರ 2, ಮರಾಠಿ 1, ತತ್ವಶಾಸ್ತ್ರ 3, ವುಮೆನ್ಸ್ ಸ್ಟಡೀಸ್ 10, ಭಾಷಾ ಶಾಸ್ತ್ರ 2, ಪ್ರದರ್ಶನ ಕಲೆ 3, ಸಂಗೀತ 2 ಹಾಗೂ ದೃಶ್ಯ ಕಲೆಯಲ್ಲಿ 9 ಮಂದಿ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ ಎಂದರು.
ಜಿಲ್ಲಾವಾರು ತೇರ್ಗಡೆಯಾದವರ ಸಂಖ್ಯೆಯನ್ನು ನೋಡುವುದಾದರೆ
ಬೆಂಗಳೂರಿನ 985, ಬೆಳಗಾವಿ 145, ಬಳ್ಳಾರಿ 299, ವಿಜಯಪುರ 233, ದಾವಣಗೆರೆ 282, ಧಾರವಾಡ 559, ಕಲಬುರಗಿ 361, ಮಂಗಳೂರು 362, ಮೈಸೂರು 1059, ಶಿವಮೊಗ್ಗ 264 ಹಾಗೂ ತುಮಕೂರಿನ 230 ಮಂದಿ ಅರ್ಹತೆ ಪಡೆದುಕೊಂಡಿದ್ದು, ಮೈಸೂರಿನವರು ಅತಿ ಹೆಚ್ಚು ಸ್ಥಾನ ಗಳಿಸಿರುವುದು ವಿಶೇಷವಾಗಿದೆ ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.