Breaking NewsLatest

ಪೆಗಾಸಸ್ ತನಿಖೆ ಮೇಲ್ವಿಚಾರಣೆಗೆ ನ್ಯಾ. ರವೀಂದ್ರನ್; ಹಲವು ಮಹತ್ವದ ತೀರ್ಪುಗಳ ‘ಹೀರೋ’

ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಮಾಡಲಾಗಿರುವ ಆರೋಪಗಳ ಕುರಿತ ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ರಚಿಸಿದ್ದು, ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ರಾಜು ವರದರಾಜುಲು ರವೀಂದ್ರನ್ ಅವರಿಗೆ ಈ ಸಮಿತಿಯ ಮಲ್ವಿಚಾರಣೆ ಹೊಣೆ ವಹಿಸಿದೆ.

ನ್ಯಾಯಮೂರ್ತಿ ರವೀಂದ್ರನ್ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದವರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಬಳಿಕವೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವವರು.

ಇದೀಗ ಅವರು ಪೆಗಾಸಸ್ ಗೂಢಚರ್ಯೆ ಆರೋಪದ ತನಿಖೆಗೆ ನೇಮಿಸಲಾಗಿರುವ ಮೂವರು ಸದಸ್ಯರ ತಾಂತ್ರಿಕ ಸಮಿತಿಯ ಮೇಲ್ವಿಚಾರಣೆ ಮಾಡಲಿದ್ದಾರೆ. ಪೆಗಾಸಸ್ ಗೂಢಚರ್ಯೆ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲಿರುವ ಈ ಸಮಿತಿಯು ಸೈಬರ್ ಭದ್ರತೆ, ಡಿಜಿಟಲ್ ಫೊರೆನ್ಸಿಕ್ಸ್, ನೆಟ್‌ವರ್ಕ್‌ಗಳು ಮತ್ತು ಹಾರ್ಡ್‌ವೇರ್‌ ತಜ್ಞರನ್ನು ಒಳಗೊಂಡಿದೆ.

ವಿಜ್ಞಾನ ಮತ್ತು ಕಾನೂನು ಪದವೀಧರರಾದ ಅವರು, ವಕೀಲಿ ವೃತ್ತಿ ಆರಂಭಿಸಿದ್ದು 1968ರ ಮಾರ್ಚ್​ನಲ್ಲಿ. 1993ರ ಫೆಬ್ರವರಿಯಲ್ಲಿ ಅವರು ಕರ್ನಾಟಕ ಹೈಕೋರ್ಟ್​ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. 2004ರ ಜುಲೈನಲ್ಲಿ ಮಧ್ಯಪ್ರದೇಶ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರಾದರು. ಸುಪ್ರೀಂ ಕೋರ್ಟ್​ ನ್ಯಾಯಾಧೀಶರಾಗಿ 2005ರ ಸೆಪ್ಟೆಂಬರ್​ನಲ್ಲಿ ನೇಮಕಗೊಂಡ ಅವರು, 2011ರ ಅಕ್ಟೋಬರ್​ನಲ್ಲಿ ನಿವೃತ್ತಿಯಾಗುವವರೆಗೂ ಅಂದರೆ ಆರು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು.

ಹಲವು ಮಹತ್ವದ ತೀರ್ಪುಗಳು
ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಅವರು ಸಾಂವಿಧಾನಿಕ ಕಾನೂನು, ಮೀಸಲಾತಿ, ಮಾನವ ಹಕ್ಕುಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹಲವಾರು ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ. ಮೈಲಿಗಲ್ಲಾಗಿ ಉಳಿದಿರುವ ಹಲವಾರು ತೀರ್ಪುಗಳ ಭಾಗವಾಗಿದ್ದಾರೆ.

ಐಐಟಿಗಳು ಮತ್ತು ಐಐಎಂಗಳು ಸೇರಿದಂತೆ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ 27 ಪ್ರತಿಶತ ಮೀಸಲಾತಿಯನ್ನು ಒದಗಿಸುವ ಮತ್ತು ಮೀಸಲಾತಿ ಪ್ರಯೋಜನದೀಂದ ಕೆನೆಪದರವನ್ನು ಹೊರತುಪಡಿಸಿದ 2006ರ ಕಾನೂನನ್ನು ಎತ್ತಿಹಿಡಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ರವೀಂದ್ರನ್ ಅವರೂ ಇದ್ದರು.

ಮತ್ತೊಂದು ಪ್ರಮುಖವಾದ ಒಂದು ತೀರ್ಪೆಂದರೆ, ರಾಜ್ಯಪಾಲರ ಪದಚ್ಯುತಿಗೆ ಸಂಬಂಧಿಸಿದ್ದು. ಜುಲೈ 2004ರಲ್ಲಿ ರಾಷ್ಟ್ರಪತಿಗಳು ಉತ್ತರ ಪ್ರದೇಶ, ಗುಜರಾತ್, ಹರಿಯಾಣ ಮತ್ತು ಗೋವಾ ರಾಜ್ಯಗಳ ರಾಜ್ಯಪಾಲರನ್ನು ಪದಚ್ಯುತಗೊಳಿಸಿದ ಹಿನ್ನೆಲೆಯಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಭಾಗವಾಗಿಯೂ ನ್ಯಾಯಮೂರ್ತಿ ರವೀಂದ್ರನ್ ಇದ್ದರು. ಆ ಪೀಠವು, ಕೇಂದ್ರದಲ್ಲಿ ಆಡಳಿತ ಬದಲಾವಣೆಯಾದ ಮೇಲೆ ರಾಜ್ಯಪಾಲರನ್ನು ಬದಲಾಯಿಸುವ ಪ್ರವೃತ್ತಿಯನ್ನು ಖಂಡಿಸಿತ್ತು. ರಾಜ್ಯಪಾಲರು ಕೇಂದ್ರ ಸರ್ಕಾರ ಅಥವಾ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ನೀತಿಗಳು ಮತ್ತು ಸಿದ್ಧಾಂತಗಳೊಂದಿಗೆ ಬೆರೆಯದವರು ಎಂಬ ಕಾರಣಕ್ಕಾಗಿಯಾಗಲೀ ಅವರ ಮೇಲೆ ಕೇಂದ್ರ ಸರ್ಕಾರ ವಿಶ್ವಾಸ ಕಳೆದುಕೊಂಡಿಯೆಂಬ ಕಾರಣದಿಂದಾಗಲೀ ಅವರನ್ನು ತೆಗೆದುಹಾಕಲಾಗುವುದಿಲ್ಲ ಎಂದು ಪೀಠವು ತೀರ್ಪು ನೀಡಿತ್ತು.

2009ರಲ್ಲಿ ಅವರು ಅಂಬಾನಿ ಸಹೋದರರ ಅನಿಲ ವಿವಾದದ ವಿಚಾರಣೆಯ ಪೀಠದಿಂದ ಹಿಂದೆ ಸರಿದಿದ್ದರು. ತಮ್ಮ ಮಗಳು ಮುಖೇಶ್ ಅಂಬಾನಿ ಗ್ರೂಪ್​ಗೆ ಸಲಹೆ ನೀಡುವ ಕಾನೂನು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕಾರಣಕ್ಕೆ ಅವರು ಆ ತೀರ್ಮಾನ ತೆಗೆದುಕೊಂಡಿದ್ದರು.

‘ಹೀರೋ’ ಕೂಡ ಫೇಲಾಗಿದ್ದರು
2011ರಲ್ಲಿ ನ್ಯಾಯಮೂರ್ತಿ ರವೀಂದ್ರನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಆಗಿನ ಸಿಜೆಐ ಎಸ್​ಎಚ್ ಕಪಾಡಿಯಾ, ನಿಜವಾದ ಹೀರೋ ಎಂದು ಕರೆದಿದ್ದರು. ಅದೇ ಸಮಾರಂಭದಲ್ಲಿ ರವೀಂದ್ರನ್ ಅವರು ತಾವು ಮೊದಲ ವರ್ಷದ ಕಾನೂನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದುದನ್ನು ಬಹಿರಂಗಪಡಿಸಿದ್ದರು.

ನಿವೃತ್ತಿಯ ಬಳಿಕ ನ್ಯಾಯಮೂರ್ತಿ ರವೀಂದ್ರನ್ ಅವರು, ಬಿಸಿಸಿಐನಲ್ಲಿ ಸುಧಾರಣೆ ತರುವುದಕ್ಕಾಗಿ ಸುಪ್ರೀಂ ಕೋರ್ಟ್ 2015ರಲ್ಲಿ ನೇಮಿಸಿದ್ದ ಆರ್​ಎಂ ಲೋಧಾ ಸಮಿತಿಯ ಭಾಗವಾಗಿದ್ದರು. ನಿವೃತ್ತಿ ಬಳಿಕ ಅವರು ನಿರ್ವಹಿಸಿದ ಬಹು ಮಹತ್ವದ ಹೊಣೆ ಇದು.

ಆಗಸ್ಟ್ 2017ರಲ್ಲಿ, ಕೇರಳದ ಅಖಿಲಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವಿಚಾರವಾಗಿ ಎನ್​ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ರವೀಂದ್ರನ್ ಅವರನ್ನು ಸುಪ್ರೀಂ ಕೋರ್ಟ್ ಕೇಳಿತ್ತು. ಆದರೆ ಅವರು ಆ ಮನವಿಯನ್ನು ತಿರಸ್ಕರಿಸಿದ್ದರು.

ನ್ಯಾಯಮೂರ್ತಿ ರವೀಂದ್ರನ್ ಅವರ ಪುಸ್ತಕವನ್ನು ಇದೇ ವರ್ಷದ ಜೂನ್​ನಲ್ಲಿ ಸಿಜೆಐ ಎನ್​ವಿ ರಮಣ ಅವರು ಬಿಡುಗಡೆ ಮಾಡಿದದ್ದರು. Anomalies in Law and Justice ಎಂಬ ಆ ಕೃತಿ ಕಾನೂನು ಮತ್ತು ನ್ಯಾಯಸಂಬಂಧಿ ಬರಹಗಳ ಸಂಗ್ರಹವಾಗಿದೆ.

Related Articles

Leave a Reply

Your email address will not be published.

Back to top button