Breaking NewsLatest

ಆಪರೇಷನ್ ಕಮಲ ಆರ್​ಎಸ್​ಎಸ್​ನಲ್ಲಿ ಕಲಿತ ಪಾಠವೇ?; ಸಿಟಿ ರವಿಗೆ ಎಚ್​ಡಿಕೆ ಪ್ರಶ್ನೆ

ಬೆಂಗಳೂರು: ಆರ್ ಎಸ್ ಎಸ್ ಬಗ್ಗೆ ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡುವ ಭರದಲ್ಲಿ ಸಂಘದ ಶಾಖೆಗೆ ಬಂದು ಅಧ್ಯಯನ ಮಾಡಿ ಎಂದು ಹೇಳಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಬುಧವಾರ ಬೆಳಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

ಸಿ.ಟಿ ರವಿ ಅವರೇ, ಮನೆಯಲ್ಲಿ ಕೂತು ಪುಸ್ತಕ ಓದಿದರೆ ಸಾಲದು ಎಂದಿದ್ದೀರಿ. RSS ಬಗ್ಗೆ ಜ್ಞಾನಾರ್ಜನೆ, ಅಧ್ಯಯನ, ಸಂಶೋಧನೆ ಮಾಡಲು ಸಂಘದ ಶಾಖೆಗೆ ಬನ್ನಿ ಎಂದು ನನಗೆ ಆಹ್ವಾನ ಕೊಟ್ಟಿದ್ದೀರಿ. ನಿಮ್ಮ ಸಂಘದೊಳಗಿನ ವಾಸ್ತವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್ ದರ್ಶನ ಆಗಿದೆ. ಇನ್ನು ಶಾಖೆಯನ್ನೇ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು. ನೀವೇ ಒಮ್ಮೆ ಊಹಿಸಿ ಎಂದು ಟಾಂಗ್ ನೀಡಿದ್ದಾರೆ.

ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದೀರಿ. ನಿಮ್ಮ ಪಕ್ಷ ಮತ್ತು ನಿಮ್ಮ ಸರಕಾರದಲ್ಲಿ ತಾಂಡವವಾಡುತ್ತಿರುವ ಅಪರಿಮಿತ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಬಗ್ಗೆಯೂ ನೀವು ಹೇಳಬೇಕು. ಅದಕ್ಕೂ ಆರ್ ಎಸ್ ಎಸ್ ಶಾಖೆಯಲ್ಲೇ ತರಬೇತಿ ನೀಡಲಾಯಿತಾ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥ ʼಆಪರೇಷನ್ ಕಮಲʼದಂಥ ʼಅನೈತಿಕʼ, ʼನಿರ್ಲಜ್ಜʼ, ʼನೀಚʼ ರಾಜಕಾರಣವನ್ನು ಆರ್ ಎಸ್ ಎಸ್ ಶಾಖೆಯಲ್ಲೇ ಕಲಿಸಲಾಯಿತಾ ಎಂಬುದನ್ನೂ ನೀವು ಜನರಿಗೆ ಹೇಳಬೇಕು ಸಿ.ಟಿ.ರವಿಯವರೇ? ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ 2,000 ರೂ. ಪರಿಹಾರ ಪಡೆಯಲು 100 ರೂ. ಲಂಚ ಕೇಳಿದ ವರದಿಗಳು ಬಂದಿವೆ. ಇದಾ ನಿಮ್ಮ ಸಮಾಜ ಸೇವೆ? ಛಿದ್ರವಾದ ಬದುಕುಗಳನ್ನೊಮ್ಮೆ ನೋಡಿ. ಜನರ ಬವಣೆಗಳ ಬಗ್ಗೆ ಆರ್ ಎಸ್ ಎಸ್ ಶಾಖೆಗಳಲ್ಲಿ ನಿಮಗೆಲ್ಲರಿಗೂ ಏನನ್ನೂ ಹೇಳಿಕೊಡುವುದಿಲ್ಲವಾ ಸಿ.ಟಿ.ರವಿಯವರೇ? ಎಂದು ಕುಮಾರ್ ಸ್ವಾಮಿ ಪ್ರಶ್ನಿಸಿದ್ದಾರೆ.

ಸೇವೆಯ ಸೋಗಿನಲ್ಲಿ ಸಂಸ್ಥೆಗಳು ರಾಜಕೀಯ ಮಾಡಬಾರದು. ಜನರ ಬವಣೆಗಳ ನಿವಾರಣೆ ನಿಟ್ಟಿನಲ್ಲಿ ದುಡಿಯಬೇಕೆ ಹೊರತು ಬದುಕಿಗೇ ಬೆಂಕಿ ಇಡಬಾರದು. ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಅದಕ್ಕೆ ಕೊಳ್ಳಿ ಇಡಬಾರದು. ಅರ್ ಎಸ್ ಎಸ್ ಹುಟ್ಟಿದಾಗಿನಿಂದಲೂ ಏನೆಲ್ಲ ಮಾಡಿಕೊಂಡು ಬಂದಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸಂಗತಿ. ಜನಪ್ರತಿನಿಧಿಗಳನ್ನು, ಸರಕಾರಗಳನ್ನು, ಆಡಳಿತ ಯಂತ್ರಾಂಗವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪರಿಪಾಠ ದೇಶಕ್ಕೆ ಒಳ್ಳೆಯದಲ್ಲ. ಅರ್ಥ ಮಾಡಿಕೊಳ್ಳಿ ಸಿ.ಟಿರವಿಯರೇ. ನಾನು ಸತ್ಯದ ಪರ ಎಂದು ಸರಣಿ ಟ್ವೀಟ್ ನಲ್ಲಿ ಕುಮಾರ ಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button