Breaking NewsLatest

ಸಿಂಘು: ರೈತರ ಪ್ರತಿಭಟನೆ ಸ್ಥಳದಲ್ಲಿ ಕೈಕಾಲು ಕತ್ತರಿಸಿದ ಸ್ಥಿತಿಯಲ್ಲಿ ಮೃತದೇಹ

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆನಡೆಸುತ್ತಿರುವ ಹರ್ಯಾಣ-ದೆಹಲಿ ಗಡಿಗೆ ಹೊಂದಿಕೊಂಡಿರುವ ಸಿಂಘು ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಕೈ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಲಗಾಲು ಮತ್ತು ಎಡಗೈ ಕತ್ತರಿಸಲಾಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಸಂಬಂಧ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬೆಳಗ್ಗೆ 5 ಗಂಟೆಗೆ ಸ್ಥಳೀಯ ಕುಂಡ್ಲಿ ಪೊಲೀಸ್ ಠಾಣೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದಾಗ ಮೃತದೇಹ ಪತ್ತೆಯಾಗಿದೆ. ಫೋರೆನ್ಸಿಕ್ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಕೆಲವು ಸುಳಿವುಗಳು ದೊರೆತಿವೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಮೃತ ವ್ಯಕ್ತಿ 35 ವರ್ಷದ ಲಖ್ಬೀರ್ ಸಿಂಗ್ ಪಂಜಾಬ್​ನ ತಮ್ ತರನ್ ಜಿಲ್ಲೆಯವನು. ದಲಿತ ಸಮುದಾಯಕ್ಕೆ ಸೇರಿರುವ ಈತ ಕಾರ್ಮಿಕ. ಈತನ ಪೋಷಕರಿಗೆ ಇವನು ದತ್ತುಮಗನಾಗಿದ್ದ. ಅವನಿಗೆ ಪತ್ನಿ, ಸಹೋದರಿ ಮತ್ತು ಮೂವರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು 12 ವರ್ಷದವಳಾದರೆ, ಕಿರಿಯವಳಿಗೆ 8 ವರ್ಷ.

ಈಗಾಗಲೇ ಕನಿಷ್ಠ 3 ವಿಡಿಯೋಗಳು ಹರಿದಾಡುತ್ತಿದ್ದು, ಸಿಖ್ ಯೋಧರೆನ್ನಲಾಗುವ ನಿಹಾಂಗ್​ಗಳ ವೇಷದಲ್ಲಿರುವ ದೊಡ್ಡ ಗುಂಪೊಂದು ಲಖ್ಬೀರ್​ನನ್ನು ಸುತ್ತುವರಿದು ಆತನಿಗೆ ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯವಿದೆ. ಒಂದು ವಿಡಿಯೋ, ಆತನ ಕೈ ಕತ್ತರಿಸಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿರುವ ಆತನ ಮೇಲೆ ಗುಂಪು ನಿಂತಿದೆ. ಆತನ ಕಣ್ಣುಗಳಲ್ಲಿ ಆಘಾತ, ನೋವು ಕಾಣಿಸುತ್ತಿದೆ. ಈಟಿಗಳನ್ನು ಹಿಡಿದಿರುವ ಕೆಲವರು ಹೆಸರು ಹೇಳುವಂತೆ ಆತನನ್ನು ಒತ್ತಾಯಿಸುತ್ತಿರುವುದು ಕೇಳಿಸುತ್ತದೆ.

ಇನ್ನೊಂದರಲ್ಲಿ ಆತನ ದೇಹವನ್ನು ತಲೆಕೆಳಗಾಗಿ ಕಟ್ಟಲಾಗಿದೆ. ಆದರೆ ಆತ ಬದುಕಿದ್ದಾನೆಯೇ ಮೃತಪಟ್ಟಿದ್ದಾನೆಯೇ ಎಂಬುದು ಅದರಲ್ಲಿ ಸ್ಪಷ್ಟವಾಗದಂತಿದೆ.

ಮೂರನೆಯದು, ನೆಲದ ಮೇಲೆ ಬಿದ್ದಿರುವ ಆತನು ಸಾಯುತ್ತಿರುವ ಕ್ಷಣಗಳನ್ನು ಗುಂಪು ವಿಡಿಯೋ ಮಾಡಿಕೊಳ್ಳುತ್ತಿರುವುದನ್ನು ತೋರಿಸುತ್ತದೆ.

ಖಚಿತವಲ್ಲದ ಮೂಲವೊಂದರ ಪ್ರಕಾರ, ಸಿಖ್ಖರ ಧರ್ಮಗ್ರಂಥವಾದ ಗುರು ಗ್ರಂಥ್ ಸಾಹಿಬ್​ನ್ನು ಅಪವಿತ್ರಗೊಳಿಸಿದನೆಂಬ ಆರೋಪದ ಮೇಲೆ ಆತನನ್ನು ಹೊಡೆದು ಸಾಯಿಸಲಾಗಿದೆ ಮತ್ತು ಆತನ ಕೈ ಕಾಲು ಕತ್ತರಿಸಲಾಗಿದೆ. ಬಳಿಕ ಪೊಲೀಸ್ ಬ್ಯಾರಿಕೇಡ್​ಗೆ ಆತನನ್ನು ತಲೆಕೆಳಗಾಗಿ ಕಟ್ಟಿ ಎಲ್ಲರಿಗೂ ಕಾಣಿಸಲು ಹಾಗೆಯೇ ಬಿಡಲಾಗಿದೆ.

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಈ ಘಟನೆಯನ್ನು ಖಂಡಿಸಿದ್ದು, ಇದರಿಂದ ಅಂತರ ಕಾಯ್ದುಕೊಂಡಿದೆ. ನಿಹಾಗ್ ಗುಂಪಾಗಲೀ ಮೃತನಾಗಲೀ ರೈತ ಸಂಘಟನೆಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಕೂಡದು. ಅಪರಾಧಿಗಳಿಗೆ ಶಿಕ್ಷೆ ಆಗಬೇಕೆಂದಿರುವ ಅದು, ಪೊಲೀಸರಿಗೆ ಈ ವಿಚಾರದಲ್ಲಿ ತನ್ನ ಬೆಂಬಲ ವ್ಯಕ್ತಪಡಿಸಿದೆ.

ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಲ್ಲಿ ಒಬ್ಬರಾದ ಯೋಗೇಂದ್ರ ಯಾದವ್ ಪ್ರಕಾರ, ಮೃತ ಲಖ್ಬೀರ್ ಕೆಲವರ ಜೊತೆಗೆ ಅಲ್ಲಿದ್ದ. ಕಳೆದ ರಾತ್ರಿ ಅವನ ವಿರುದ್ಧದ ಆರೋಪದ ವಿಚಾರವಾಗಿ ಗಲಾಟೆಯಾಗಿದೆ.

Related Articles

Leave a Reply

Your email address will not be published.

Back to top button