Breaking NewsLatest

ರಸಗೊಬ್ಬರ ಕೊರತೆ ನಿವಾರಣೆ; ಕೇಂದ್ರ ಸಚಿವರ ಭರವಸೆ

ಬೆಂಗಳೂರು: ಸುಮಾರು 32 ಸಾವಿರ ಮೆಟ್ರಿಕ್ ಟನ್ ಡಿಎಪಿ ಹಾಗೂ ಸುಮಾರು 10 ಸಾವಿರ ಮೆಟ್ರಿಕ್ ಟನ್ ಎಂಓಪಿ ಕೊರತೆ ಇದ್ದು, ಅದನ್ನು ರಾಜ್ಯಕ್ಕೆ ವಾರದೊಳಗೆ ಪೂರೈಸಲು ಕೇಂದ್ರ ಸಮ್ಮತಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ನವದೆಹಲಿಯಲ್ಲಿ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿ ಸಂದರ್ಭದಲ್ಲಿ ಅವರು ರಾಜ್ಯದ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಭೇಟಿ ನಂತರ ಸಿಎಂ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ರಾಜ್ಯದ ಲಸಿಕೆ ಅಭಿಯಾನದ ಕುರಿತು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ 1.48 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಈ ಕುರಿತು ಅವರು ಸಂತೋಷ ವ್ಯಕ್ತಪಡಿಸಿದರು. ಈವರೆಗೆ ಶೇ. 81 ರಷ್ಟು ಮೊದಲ ಡೋಸ್ ಹಾಗೂ ಶೇ. 37 ರಷ್ಟು ಎರಡನೇ ಡೋಸ್ ನೀಡಲಾಗಿದೆ. 51 ಲಕ್ಷ ಡೋಸ್ ದಾಸ್ತಾನು ಲಭ್ಯವಿದ್ದು, ಎರಡನೇ ಡೋಸ್ ನೀಡಲು ಒತ್ತು ನೀಡಲಾಗುವುದು ಎಂದರು.

ಡಿಸೆಂಬರ್ ಅಂತ್ಯದೊಳಗೆ ಮೊದಲ ಡೋಸ್ 90 ಶೇಕಡಾ ಹಾಗೂ ಎರಡನೇ ಡೋಸ್ ಕನಿಷ್ಠ 70 ಶೇಕಡಾ ಕೊಡಬೇಕೆಂಬ ಗುರಿ ಇದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಿಮ್ಹಾನ್ಸ್ ಘಟಿಕೋತ್ಸವಕ್ಕಾಗಿ ಸೋಮವಾರ ಸಚಿವರು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯದ ಆರೋಗ್ಯ ಸೇವಾ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಿ, ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.

Related Articles

Leave a Reply

Your email address will not be published.

Back to top button