ಲಖೀಂಪುರಕ್ಕೆ ರೈತರ ಮೆರವಣಿಗೆ; ಲಕ್ನೋದಲ್ಲಿ ರೈಲು ತಡೆ, ಮಹಾ ಪಂಚಾಯತ್
ನವದೆಹಲಿ: ರೈತರ ಹತ್ಯೆ ನಡೆದ ಉತ್ತರ ಪ್ರದೇಶದ ಲಖೀಂಪುರಕ್ಕೆ ರೈತರು ಪಾದಯಾತ್ರೆ ನಡೆಸಲಿದ್ದು, ಒಟ್ಟು 8 ಮಂದಿಯನ್ನು ಬಲಿ ಪಡೆದ ಹಿಂಸಾಚಾರ ಖಂಡಿಸಿ ಅಕ್ಟೋಬರ್ 18ರಂದು ರೈಲು ತಡೆ ಮತ್ತು ಅಕ್ಟೋಬರ್ 26ರಂದು ಮಹಾ ಪಂಚಾಯತ್ ನಡೆಸಲಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ಮತ್ತು, ಘಟನೆಯ ಪ್ರಮುಖ ಆರೋಪಿ, ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಬಂಧನಕ್ಕೂ ರೈತರು ಆಗ್ರಹಿಸಲಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೇಶಾದ್ಯಂತದಿಂದ ರೈತರು ಅಕ್ಟೋಬರ್ 12ರಂದು ಲಖೀಂಪುರ ಖೇರಿ ತಲುಪಲಿದ್ದಾರೆ.
ಲಖೀಂಪುರದಲ್ಲಿ ನಡೆದಿರುವುದು ಜಲಿಯನ್ವಾಲಾ ಬಾಗ್ ಹತ್ಯಾಕಾಂಡಕ್ಕಿಂತ ಕಡಿಮೆಯದ್ದಲ್ಲ ಎಂದಿರುವ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್, ಈ ಘೋರ ಘಟನೆಯನ್ನು ಖಂಡಿಸಿ ಎಲ್ಲ ನಾಗರಿಕರು ತಮ್ಮ ತಮ್ಮ ನಗರಗಳಲ್ಲಿ ಅಕ್ಟೋಬರ್ 12ರಂದು ರಾತ್ರಿ 8ಕ್ಕೆ ಮೊಂಬತ್ತಿ ಮೆರವಣಿಗೆ ನಡೆಸುವಂತೆ ಮನವಿ ಮಾಡಿದ್ದಾರೆ.
ಲಖೀಂಪುರ ಹಿಂಸಾಚಾರದಲ್ಲಿ ಬಲಿಯಾದ ರೈತರ ಚಿತಾಭಸ್ಮವನ್ನು ರೈತರು ಎಲ್ಲ ರಾಜ್ಯಗಳಿಗೂ ಕೊಂಡೊಯ್ದು ವಿಸರ್ಜಿಸಲಿದ್ದಾರೆ. ದಸರೆಯಂದು (ಅ. 15) ಎಲ್ಲ ರೈತರು ಪ್ರಧಾನಿ ಮೋದಿ ಮತ್ತು ಕೆಂದ್ರ ಗೃಹಮಂತ್ರಿ ಅಮಿತ್ ಶಾ ಪ್ರತಿಕೃತಿಯನ್ನು ದಹಿಸಲಿದ್ದಾರೆ ಎಂದು ಯಾದವ್ ಹೇಳಿದ್ದಾರೆ.
ರೈಲು ತಡೆ ಮತ್ತು ಮಹಾ ಪಂಚಾಯತ್ ಲಕ್ನೋದಲ್ಲಿ ನಡೆಯಲಿದೆ ಎಂದು ಅವರು ಪ್ರಕಟಿಸಿದ್ದಾರೆ.
ಈ ನಡುವೆ, ಶುಕ್ರವಾರ ಪೊಲೀಸ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಆಶಿಶ್ ಮಿಶ್ರಾ, ಸುಪ್ರೀಂ ಕೋರ್ಟ್ ಎಚ್ಚರಿಕೆ ಬಳಿಕ ಇಂದು ಪೊಲೀಸರೆದುರು ವಿಚಾರಣೆಗೆ ಹಾಜರಾಗಿದ್ದಾನೆ. ಆತನನ್ನು ಬಿಗಿ ಪೊಲೀಸ್ ಭದ್ರತೆ ನಡುವೆ ವಿಚಾರಣೆಗೆ ಕರೆತರಲಾಗಿರುವ ಬಗ್ಗೆ ವರದಿಗಳಾಗಿವೆ.