ಯುಪಿಯಲ್ಲಿ ನಡೆದೀತು, ಇಲ್ಲಿ ಅಂಥ ಕಾನೂನು ಬಾಹೀರ ಕ್ರಮ ಕೂಡದು; ಯುಪಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ತರಾಟೆ
ನವದೆಹಲಿ: ದೆಹಲಿಯ ವ್ಯಕ್ತಿಯೊಬ್ಬನೊಂದಿಗೆ ಮಹಿಳೆ ಓಡಿಹೋಗಿ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಆರೋಪದ ಮೇಲೆ ಇಬ್ಬರನ್ನು ದೆಹಲಿ ಪೊಲೀಸರಿಗೆ ಮಾಹಿತಿ ನೀಡದೆ ಬಂಧಿಸಿದ್ದಕ್ಕೆ ಉತ್ತರ ಪ್ರದೇಶ ಪೊಲೀಸರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಇದೇ ಜುಲೈ 1ರಂದು ಸ್ವ ಇಚ್ಛೆಯಿಂದ ವಿವಾಹವಾಗಿರುವುದಾಗಿ ಹೇಳಿಕೊಂಡಿರುವ ದಂಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ, ಯುಪಿ ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಮಹಿಳೆಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ವಿವಾಹಿತನ ತಂದೆ ಮತ್ತು ಸಹೋದರನನ್ನು ಯುಪಿ ಪೊಲೀಸರು ಆಗಸ್ಟ್ 6 ಮತ್ತು 7ರ ಮಧ್ಯರಾತ್ರಿ ಅವರ ನಿವಾಸದಿಂದ ಕರೆದೊಯ್ದಿದ್ದು, ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ದಂಪತಿ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದೆಲ್ಲಾ ನಿಮ್ಮ ಯುಪಿಯಲ್ಲಿ ನಡೆದೀತು. ಇಂಥ ಕಾನೂನು ಬಾಹೀರ ಕ್ರಮ ಇಲ್ಲಿ ರಾಜಧಾನಿಯಲ್ಲಿ ನಡೆಯಲಾರದು. ನೀವು ದೆಹಲಿಗೆ ಬಂದು ವ್ಯಕ್ತಿಗಳನ್ನು ಎತ್ತಿಕೊಂಡು ನಂತರ ಶಾಮ್ಲಿಯಲ್ಲಿ ಬಂಧಿಸಿರುವಂತೆ ತೋರಿಸಿರುವ ಈ ಕಾನೂನುಬಾಹೀರ ಕ್ರಮವನ್ನು ನಾವು ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ನ್ಯಾಯಾಲಯದ ಎದುರು ಹಾಜರಿದ್ದ ಯುಪಿ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಯುಪಿ ಪೊಲೀಸರು ಪ್ರತಿ ಹಂತದಲ್ಲೂ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಯಾವುದೇ ಕಾನೂನುಬಾಹೀರ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಮತ್ತು ಪೊಲೀಸರು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಕೂಡ ಕೋರ್ಟ್ ಎಚ್ಚರಿಸಿದೆ.
ಈ ಪ್ರಕರಣದಲ್ಲಿ ಮುಂದುವರಿಯುವ ಮೊದಲು ಮಹಿಳೆಯ ವಯಸ್ಸನ್ನು ಪರಿಶೀಲಿಸದೇ ಇದ್ದುದಕ್ಕಾಗಿ ನ್ಯಾಯಾಲಯವು ಯುಪಿ ಪೊಲೀಸರನ್ನು ಪ್ರಶ್ನಿಸಿತು. ಹುಡುಗಿ ಮೇಜರ್ ಅಲ್ಲವೇ ಎಂದು ಕೇಳಿದ್ದೀರಾ? ಅವಳು ಮೇಜರ್ ಆಗಿದ್ದರೆ, ಅವಳ ನಿರ್ಧಾರಕ್ಕೆ ಬೆಲೆಯಿರುತ್ತದೊ ಪೋಷಕರ ತೀರ್ಮಾನಕ್ಕೊ? ನೀವು ತನಿಖೆ ಮಾಡಿದಾಗ ದೂರುದಾರರನ್ನು ಕೇಳುವುದಿಲ್ಲವೇ? ಆರೋಪಿಗಳನ್ನು ಬಂಧಿಸಲು ಪ್ರಾರಂಭಿಸಿಬಿಡುತ್ತೀರಾ? ಎಂದು ಕಟುವಾಗಿ ಕೇಳಿದೆ.