ಕೋವ್ಯಾಕ್ಸಿನ್: ಸ್ಪಷ್ಟೀಕರಣ ಕೇಳಿದ ವಿಶ್ವ ಆರೋಗ್ಯ ಸಂಸ್ಥೆ
ನವದೆಹಲಿ: ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿರುವವರ ವಿದೇಶ ಪ್ರವಾಸ ಇನ್ನೂ ಅತಂತ್ರ ಸ್ಥಿತಿಯಲ್ಲಿದ್ದು, ವಿದೇಶಿ ಸರ್ಕಾರಗಳು ಈ ಲಸಿಕೆಯನ್ನು ಒಪ್ಪಿಕೊಳ್ಳುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಂಗೀಕಾರ ಸಿಗುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅದು ಕೋವ್ಯಾಕ್ಸಿನ್ ತಯಾರಿಕಾ ಕಂಪನಿಯಾದ ಹೈದರಾಬಾದ್ನ ಭಾರತ್ ಬಯೋಟೆಕ್ನಿಂದ ಸ್ಪಷ್ಟೀಕರಣಗಳನ್ನು ಕೇಳಿದೆ.
ತುರ್ತು ಬಳಕೆ ಯಾದಿಗೆ ಲಸಿಕೆಯನ್ನು ಸೇರಿಸುವ ತೀರ್ಮಾನ ತೆಗೆದುಕೊಳ್ಳಬೇಕಾದ ತಾಂತ್ರಿಕ ಸಲಹಾ ತಂಡ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಲಸಿಕೆ ತಯಾರಿಕಾ ಸಮಸ್ಥೆಯಿಂದ ಅಪೇಕ್ಷಿಸಿದ್ದು, ಈ ವಾರದೊಳಗೆ ಭಾರತ್ ಬಯೋಟೆಕ್ ಸ್ಪಷ್ಟೀಕರಣಗಳನ್ನು ಸಲ್ಲಿಸಬೇಕಿದೆ.
ನವೆಂಬರ್ 3ರಂದು ತುರ್ತು ಬಳಕೆ ಯಾದಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಂತಿಮ ಸಭೆ ನಡೆಯಲಿದೆ.
ಕೋವ್ಯಾಕ್ಸಿನ್ನ್ನು ತುರ್ತು ಬಳಕೆ ಯಾದಿಗೆ ಸೇರಿಸಬೇಕೇ ಬೇಡವೇ ಎಂಬ ವಿಚಾರದಲ್ಲಿ ಸ್ವತಂತ್ರ ಸಲಹಾ ತಂಡವಾಗಿರುವ ತಾಂತ್ರಿಕ ಸಲಹಾ ತಂಡ ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸು ಮಾಡಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ಸೇರಿದ್ದ ತಂಡ, ಅಂತಮ ಮೌಲ್ಯಮಾಪನ ಕೈಗೊಳ್ಳಲು ಅಗತ್ಯವಾದ ಹೆಚ್ಚುವರಿ ಸ್ಪಷ್ಟೀಕರಣವನ್ನು ಪಡೆಯಲು ತೀರ್ಮಾನಿಸಿತು. ತುರ್ತು ಬಳಕೆ ಯಾದಿಗೆ ಸೇರಿದರೆ ಕೋವ್ಯಾಕ್ಸಿನ್ ವಿಶ್ವವ್ಯಾಪಿ ಬಳಕೆ ಸಾಧ್ಯವಾಗಲಿದೆ.