ಪಕ್ಷಪಾತ ಆರೋಪ; ಕಂಗನಾ ಅರ್ಜಿ ವರ್ಗಾವಣೆ ಮನವಿ ತಿರಸ್ಕರಿಸಿದ ಕೋರ್ಟ್
ಮುಂಬೈ: ಕಂಗನಾ ರನಾವತ್ ವಿರುದ್ಧ ಗೀತರಚನೆಕಾರ ಜಾವೇದ್ ಅಖ್ತರ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನ್ಯಾಯಯುತವಾಗಿ ವರ್ತಿಸಿದ್ದಾರೆ ಮತ್ತು ನಟಿ ವಿರುದ್ಧ ಯಾವುದೇ ಪಕ್ಷಪಾತ ತೋರಿಸಿಲ್ಲ ಎಂದು ಮುಂಬೈನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಪ್ರಕ್ರಿಯೆಯನ್ನು ಕೋರ್ಟ್ ಅನುಸರಿಸಿದ ಮಾತ್ರಕ್ಕೆ ಅದು ಅರ್ಜಿದಾರರ ವಿರುದ್ಧ ಪಕ್ಷಪಾತ ಎಂದು ಅರ್ಥವಲ್ಲ ಎಂದು ಹೇಳಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಟಿ ದಂಡೆ, ಬೇರೆ ಕೋರ್ಟ್ಗೆ ವರ್ಗಾಯಿಸುವಂತೆ ಕಂಗನಾ ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದಾರೆ.
ಅರ್ಜಿಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕಳೆದ ತಿಂಗಳು ಕಂಗನಾ ಕೋರಿದ್ದರು. ಇದು ಜಾಮೀನು ಸಿಗುವ ಪ್ರಕರಣವಾಗಿದ್ದರೂ, ಕೋರ್ಟ್ಗೆ ಹಾಜರಾಗದಿದ್ದಲ್ಲಿ ವಾರಂಟ್ ಹೊರಡಿಸುವ ಪರೋಕ್ಷ ಬೆದರಿಕೆ ಹಾಕುತ್ತಿರುವ ಅಂಧೇರೊ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಚಾರಲದಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ. ಕೋರ್ಟ್ ತನ್ನ ವಿರುದ್ಧ ಪಕ್ಷಪಾತ ತೋರಿಸುತ್ತಿದೆ ಎಂದು ಅವರು ಆರೋಪಿಸಿದ್ದರು.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಗೆ ಎಲ್ಲಾ ವಿನಾಯಿತಿಯನ್ನೂ ನೀಡಿದೆ. ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನೀಡಿದ ಎಲ್ಲಾ ಆದೇಶಗಳನ್ನು ಪರಿಶೀಲಿಸಿದ್ದೇನೆ. ಅವೆಲ್ಲವೂ ನ್ಯಾಯಯುತವಾಗಿವೆ ಎಂದು ದಂಡೆ ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಅಂಧೇರಿ ನ್ಯಾಯಾಲಯ ನೀಡಿದ ಆದೇಶವನ್ನು ಸೆಷನ್ಸ್ ನ್ಯಾಯಾಲಯವು ದೃಢಪಡಿಸಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿನ ತನ್ನ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಕಂಗನಾ ಮಾಡಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದೂ ಕೋರ್ಟ್ ಹೇಳಿದೆ.