ಅರುಣಾಚಲ ಪ್ರದೇಶದಲ್ಲಿ ಚೀನೀ ಹಳ್ಳಿ; ಅಮೆರಿಕಾ ರಕ್ಷಣಾ ವರದಿಯಲ್ಲಿ ಉಲ್ಲೇಖ
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ನೂರು ಮನೆಗಳಿರುವ ಒಂದು ಚೀನೀ ಹಳ್ಳಿಯೇ ನಿರ್ಮಾಣವಾಗಿದೆ. ಅಮೆರಿಕಾ ರಕ್ಷಣಾ ಇಲಾಖೆಯ ವಾರ್ಷಿಕ ವರದಿ ಇದನ್ನು ಉಲ್ಲೇಖಿಸಿದೆ.
ಚೀನಾ ಸೇನೆಯ ಕಾರಣದಿಂದಾಗಿ ಭಾರತದ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಉಂಟಾಗಿರುವ ಉದ್ವಿಗ್ನ ಸ್ಥಿತಿ ಕುರಿತಂತೆ ಅಮೆರಿಕಾ ತನ್ನ ಗ್ರಹಿಕೆಗಳನ್ನು ಈ ವರದಿಯಲ್ಲಿ ನಿರೂಪಿಸಿದೆ. ಚೀನಾ ಸೇನೆ 100 ಮನೆಗಳ ಒಂದು ಚೀನೀ ಹಳ್ಳಿಯನ್ನೇ ನಿರ್ಮಿಸಿರುವುದನ್ನೂ ಉಲ್ಲೇಖಸಿರುವ ವರದಿಯನ್ನು ಯುಎಸ್ ಕಾಂಗ್ರೆಸ್ಗೆ ಸಲ್ಲಿಸಲಾಗಿದೆ.
ಮೆಕ್ಮಹೊನ್ ರೇಖೆಯ ದಕ್ಷಿಣಕ್ಕೆ ಭಾರತದ ಭೂಪ್ರದೇಶದೊಳಗೆ ಚೌಕವಾಗಿ ಈ ಹೊಸ ಚೀನೀ ಹಳ್ಳಿ ನಿರ್ಮಾಣಗೊಂಡಿದೆ. ಕೆಲವು ತಿಂಗಳುಗಳ ಹಿಂದೆಯೇ ಈ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಇದೀಗ ಅಮೆರಿಕಾ ರಕ್ಷಣಾ ಇಲಾಖೆ ವರದಿ ಅದರ ಬಗ್ಗೆ ಪ್ರಸ್ತಾಪಿಸಿದೆ.
ವರದಿಯ ಚೀನಾ-ಭಾರತ ಗಡಿ ಬಿಕ್ಕಟ್ಟಿನ ಕುರಿತ ಅಧ್ಯಾಯದಲ್ಲಿ ಯುಎಸ್ ರಕ್ಷಣಾ ಇಲಾಖೆಯು ಹೇಳುವಂತೆ, 2020ರಲ್ಲಿ ಯಾವಾಗಲೋ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್ಸಿ), ಟಿಬೆಟ್ ಸ್ವಾಯತ್ತ ಪ್ರದೇಶ ಮತ್ತು ವಾಸ್ತವ ನಿಯಂತ್ರಣ ರೇಖೆಯ ಪೂರ್ವ ವಲಯದಲ್ಲಿ ಬರುವ ಭಾರತದ ಅರುಣಾಚಲ ಪ್ರದೇಶ ರಾಜ್ಯದ ನಡುವಿನ ವಿವಾದಿತ ಪ್ರದೇಶದೊಳಗೆ 100 ಮನೆಗಳ ದೊಡ್ಡ ಗ್ರಾಮವನ್ನು ನಿರ್ಮಿಸಿದೆ.
ಭಾರತ-ಚೀನಾ ಗಡಿಯಲ್ಲಿನ ಈ ಹಳ್ಳಿಯ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಪ್ರಯತ್ನಗಳು ಭಾರತ ಸರ್ಕಾರದ ಮತ್ತು ಭಾರತೀಯ ಮಾಧ್ಯಮಗಳ ದಿಗ್ಭ್ರಮೆಗೆ ಕಾರಣವಾಗಿವೆ ಎಂದು ಯುಎಸ್ ವರದಿ ಹೇಳಿದೆ.
ಈ ಪ್ರಶ್ನಾರ್ಹ ಗ್ರಾಮವು ತ್ಸಾರಿ ಚು ನದಿಯ ದಡ ಮತ್ತು ಅರುಣಾಚಲ ಪ್ರದೇಶದ ಮೇಲಿನ ಸುಬನ್ಸಿರಿ ಜಿಲ್ಲೆಯಲ್ಲಿದೆ. ಇದು 1962ರ ಯುದ್ಧಕ್ಕೂ ಮುಂಚೆಯೇ ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಂಘರ್ಷ ನಡೆದ ಪ್ರದೇಶ.
ಚೀನಾ ದಶಕಕ್ಕೂ ಹೆಚ್ಚು ಕಾಲದಿಂದ ಈ ಪ್ರದೇಶದಲ್ಲಿ ಸಣ್ಣ ಮಿಲಿಟರಿ ಔಟ್ಪೋಸ್ಟ್ ಹೊಂದಿತ್ತು. ಆದರೆ 2020ರಲ್ಲಿ ಪೂರ್ಣ ಪ್ರಮಾಣದ ಗ್ರಾಮವನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ಈ ಪ್ರದೇಶದಲ್ಲಿ ಭಾರತೀಯ ಪ್ರದೇಶದೊಳಗೆ ರಸ್ತೆ ನಿರ್ಮಾಣ ಚಟುವಟಿಕೆಯನ್ನು ಹೆಚ್ಚಿಸಿದ ಬಳಿಕ ಇಡೀ ಸನ್ನಿವೇಶವೇ ಸಂಪೂರ್ಣವಾಗಿ ಬದಲಾಗಿದೆ.
ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನಡೆಯುತ್ತಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಹೊರತಾಗಿಯೂ, ವಾಸ್ತವ ನಿಯಂತ್ರಣ ರೇಖೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ನಿರ್ದಿಷ್ಟ ಉದ್ದೇಶದ ಮತ್ತು ಯುದ್ಧತಂತ್ರದ ಕ್ರಮಗಳನ್ನು ಹೆಚ್ಚಿಸುತ್ತಲೇ ಇದೆ ಎಂದು ಯುಎಸ್ ವರದಿ ಉಲ್ಲೇಖಿಸಿದೆ.