ಆರ್ಯನ್ ಖಾನ್ ಸೇರಿದಂತೆ ಮೂವರಿಗೆ ಬಾಂಬೆ ಹೈಕೋರ್ಟ್ ನಿಂದ ಜಾಮೀನು ಮಂಜೂರು
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಟ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಆರ್ಯನ್ ಖಾನ್ ಸೇರಿ ಮೂವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಸೇರಿದಂತೆ ಮೂವರ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್ ನಲ್ಲಿ ನಡೆಯಿತು. ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು ಮಂಜೂರಾಗಿದ್ದು, ನಾಳೆ ಷರತ್ತುಗಳ ಬಗ್ಗೆ ಕೋರ್ಟ್ ಆದೇಶಿಸಲಿದೆ. ಈ ಹಿನ್ನೆಲೆ ನಾಳೆ ಆರ್ಯನ್ ಖಾನ್ ಗೆ ಬಿಡುಗಡೆ ಭಾಗ್ಯ ಸಿಗಲಿದೆ.
ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಮಾಡೆಲ್ ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು ಇದರ ವಿರುದ್ದ ಆರೋಪಿಗಳ ಪರ ವಕೀಲರು ಬಾಂಬೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 26ರಂದು ನಡೆಸುವುದಾಗಿ ಬಾಂಬೆ ಹೈಕೋರ್ಟ್ ನ್ಯಾಯಾಮೂರ್ತಿ ಎನ್. ಡಬ್ಲ್ಯು.ಸಾಂಬ್ರೆ ಅವರ ಏಕ ಸದಸ್ಯ ತಿಳಿಸಿತ್ತು.
ಆರ್ಯನ್ ಪರ ವಾದ ಮಂಡನೆ ಮಾಡಿದ ವಕೀಲ ಮುಕುಲ್ ರೋಹ್ಟಗಿ. ಆರ್ಯನ್ ಖಾನ್ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಸೂಕ್ತ ಕಾರಣ ನೀಡದೇ ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ ಸೂಕ್ತ ಕಾರಣ ತಿಳಿಸಬೇಕಿತ್ತು. ಯಾವ ಕಾರಣಕ್ಕೆ ಬಂಧನವೆಂದು ತಿಳಿದುಕೊಳ್ಳುವ ಹಕ್ಕಿದೆ. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್ಸಿಬಿ ದಾರಿ ತಪ್ಪಿಸಿದೆ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದರು.
ಅಕ್ಟೋಬರ್ 2ರಂದು ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿ ಮೇಲೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್ಸಿಬಿ) ದಾಳಿ ಮಾಡಿತ್ತು. ಆಗ ಡ್ರಗ್ ಸೇವನೆ ಆರೋಪದ ಮೇಲೆ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿತ್ತು.