ಕಾಂಗ್ರೆಸ್ ಸಭೆಯಲ್ಲಿ ಸರ್ದಾರ್ ಪಟೇಲರನ್ನು ನಿಂದಿಸಲಾಯಿತೆ?; ಸೋನಿಯಾ ಗಾಂಧಿಗೆ ಬಿಜೆಪಿ ಪ್ರಶ್ನೆ
ನವದೆಹಲಿ: ವಾರಾಂತ್ಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ದಾರ್ ಪಟೇಲ್ ಅವರನ್ನು ನಿಂದಿಸಲಾಗಿದೆ ಎಂಬ ವಿಚಾರಕ್ಕೆ ಕೆರಳಿರುವ ಬಿಜೆಪಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಟೇಲ್ ಅವರನ್ನು ಸಭೆಯಲ್ಲಿ ನಿಂದಿಸಲಾಯಿತೆ ಎಂದು ಅದು ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದೆ.
ಕಾಂಗ್ರೆಸ್ ಸಭೆಯಲ್ಲಿ ಕಾಶ್ಮೀರದ ನಾಯಕ ತಾರೀಖ್ ಹಮೀದ್ ಕರ್ರಾ ಮಾತನಾಡಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಹೊರಗಿಡಲು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ಮುಹಮ್ಮದ್ ಅಲಿ ಜಿನ್ನಾ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಪ್ರಸ್ತಾಪಿಸಿರುವ ಬಿಜೆಪಿ, ಇದು ಆಕ್ಷೇಪಾರ್ಹ ಎಂದಿದೆ.
ಜಿನ್ನಾರನ್ನು ಪಟೇಲ್ ಭೇಟಿಯಾಗಿದ್ದರು ಎಂದು ಕರ್ರಾ ಹೇಳಿರುವುದಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆಕ್ಷೇಪಿಸಿದ್ದಾರೆ.
ಜವಾಹರಲಾಲ್ ನೆಹರು ಅವರು ಜಮ್ಮು ಮತ್ತು ಕಾಶ್ಮೀರವನ್ನು ಭಾರತದಲ್ಲಿಯೇ ಉಳಿಸಿಕೊಳ್ಳಲು ಬಯಸಿದ್ದ ಹೊತ್ತಲ್ಲಿ, ಸರ್ದಾರ್ ಪಟೇಲ್ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಬಯಸಿದ್ದರು. ಈ ಸಭೆಯಲ್ಲಿ ಸರ್ದಾರ್ ಪಟೇಲ್ ಬಗ್ಗೆ ಕರ್ರಾ ಹಾಗೆ ಮಾತನಾಡಿದರೂ ಸೋನಿಯಾ ಗಾಂಧಿ ತಕರಾರೆತ್ತಲಿಲ್ಲ. ಯಾಕೆಂದರೆ ಕರ್ರಾ ಗಾಂಧಿ ಕುಟುಂಬದ ಒಡನಾಡಿ ಎಂದು ಪಾತ್ರ ಟೀಕಿಸಿದ್ದಾರೆ.
ಕರ್ರಾ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಇಸಿದೆಯೆ? ಅವರನ್ನು ಸಿಡಬ್ಲ್ಯೂಸಿಯಿಂದ ಹೊರಹಾಕಲಾಗುತ್ತದೆಯೇ? ಎಂದು ಪ್ರಶ್ನಿಸಿದ ಪಾತ್ರ, ಒಂದು ಕುಟುಂಬವು ಎಲ್ಲವನ್ನೂ ಮಾಡಿದೆ ಮತ್ತು ಇತರರು ಏನನ್ನೂ ಮಾಡಿಲ್ಲ ಎಂದುಕೊಳ್ಳುವುದು ಯಾವ ಬಗೆಯ ಮನಃಸ್ಥಿತಿ ಎಂದು ಕಿಡಿ ಕಾರಿದ್ದಾರೆ.
ಶನಿವಾರ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಕರ್ರಾ ಪಾಲ್ಗೊಂಡಿದ್ದರು ಮತ್ತು ಅವರು ಪಟೇಲ್ ಬಗ್ಗೆ ಅನುಚಿತವಾಗಿ ಮಾತನಾಡಿದರೆಂದು ಮಾಧ್ಯಮದ ಕೆಲವು ವರದಿಗಳು ಹೇಳಿದ್ದವು. ಆದರೆ ಕಾಂಗ್ರೆಸ್ ಇದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದು, ಅಂಥ ಯಾವುದೇ ಸಭೆಯಲ್ಲಿ ನಡೆದಿಲ್ಲ ಎಂದಿದೆ.