ನಾಳೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ: ಬೊಮ್ಮಾಯಿ
ಬೆಂಗಳೂರು: ನಾಳೆ (ಭಾನುವಾರ) ಮಧ್ಯಾಹ್ನ ನಡೆಯಲಿರುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವಿಸ್ತೃತ ಚರ್ಚೆ ನಂತರ ಸಿಂದಗಿ ಮತ್ತು ಹಾನಗಲ್ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಮಾಡಿ ಪಕ್ಷ ವರಿಷ್ಠರ ಒಪ್ಪಿಗೆಗೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ವಾತಾವರಣದಲ್ಲಿ ಎರಡೂ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ವಿಜಯಶಾಲಿಯಾಗುವ ನಿರೀಕ್ಷೆ ಇದೆ ಎಂದರು.
ಇದರೊಂದಿಗೆ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಚುನಾವಣಾ ಉಸ್ತುವಾರಿಗಳನ್ನೂ ಆಯ್ಕೆ ಮಾಡಲಾಗುವುದು. ಕೆಲವು ಸಚಿವರೊಂದಿಗೆ ಪಕ್ಷದ ಮುಖಂಡರನ್ನು ಚುನಾವಣಾ ಉಸ್ತುವಾರಿಗಳಾಗಿ ನೇಮಿಸಲು ಉದ್ದೇಶಿಸಲಾಗಿದೆ. ಒಟ್ಟಾರೆ ಪಕ್ಷದ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕೋವಿಡ್ ಕಷ್ಟದ ನಡುವೆ ಬೆಂಗಳೂರಿನಲ್ಲಿ ಕಾನ್ಸ್ಟಿಟ್ಯೂಷನಲ್ ಕ್ಲಬ್ ಸ್ಥಾಪನೆಗೆ ವಿರೋಧ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಕಳೆದ ಹತ್ತು ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆಯೇ ನಾವು ಅದನ್ನು ಸ್ಥಾಪಿಸುತ್ತಿಲ್ಲ. ಸೂಕ್ತ ಸಮಯದಲ್ಲಿ ಸ್ಥಾಪಿಸಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಕುಟುಂಬಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿ, ಸಮಸ್ಯೆಗಳು ತಾತ್ಕಾಲಿಕ, ಅದಕ್ಕೆ ಆತ್ಮಹತ್ಯೆ ಪರಿಹಾರ ಅಲ್ಲ. ಸಮಾಜ ಮತ್ತು ಸರ್ಕಾರ ಒಟ್ಟುಗೂಡಿ ಆತ್ಮಹತ್ಯೆ ವಿರುದ್ಧ ಹೋರಾಡಬೇಕು. ಆತ್ಮಹತ್ಯೆ ಬದಲು ಆತ್ಮ ಸ್ಥೈರ್ಯದಿಂದ ಬದುಕಬೇಕು ಎಂದು ಹೇಳಿದರು.