Breaking News

ಅಕ್ಕಿ, ಎಣ್ಣೆ ಎಂದು ಎಲ್ಲರನ್ನೂ ಸಾಲದ ಸುಳಿಗೆ ತಳ್ಳಿದ್ದು ಸಿದ್ದರಾಮಯ್ಯ; ಬಿಜೆಪಿ ಆರೋಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಎಲ್ಲರನ್ನೂ ಸಾಲದ ಸುಳಿಗೆ ದೂಡಿಬಿಟ್ಟರು. ವಿತ್ತೀಯ ಶಿಸ್ತನ್ನೇ ಹದಗೆಡಿಸಿದರು ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಈ ಸಂಬಂಧ ಬಿಜೆಪಿ ಸರಣಿ ಟ್ವಿಟ್ ಮಾಡಿದೆ. ಹಗುರ ಹೇಳಿಕೆ ನೀಡದಂತೆ ಪಕ್ಷ ವರಿಷ್ಠರ ಕಟ್ಟುನಿಟ್ಟಿನ ಸೂಚನೆ ನಡುವೆಯೂ ರಾಜ್ಯ ಬಿಜೆಪಿ ತನ್ನ ಪ್ರತಿ ಟ್ವಿಟ್ ನಲ್ಲಿ ಸಿದ್ದರಾಮಯ್ಯರನ್ನು ಬುರುಡೇ ರಾಮಯ್ಯ ಎಂದು ಟ್ಯಾಗ್ ಲೈನ್ ಹಾಕುವುದನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮಾಡಿದ ಅತಿದೊಡ್ಡ ಸಾಧನೆ ಎಂದರೆ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೂ 44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಎಲ್ಲರನ್ನೂ ಸಾಲದ ಸುಳಿಗೆ ದೂಡಿಬಿಟ್ಟರು. ವಿತ್ತೀಯ ಶಿಸ್ತನ್ನೇ ಹದೆಗೆಡಿಸಿದರು ಎಂದು ಟ್ವಿಟ್ ನಲ್ಲಿ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.

ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ಮಜವಾದಿ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲ ಶ್ರೇಣಿಯಲ್ಲಿ ನಿಲ್ಲುವವರು ಸಿದ್ದರಾಮಯ್ಯ. ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿಗೆ ತಲುಪಿಸಿದ್ದೇ ಅವರ ಸಾಧನೆ ಎಂದು ಬಿಜೆಪಿ ಹೇಳಿದೆ.

ಇನ್ನೊಂದು ಟ್ವಿಟ್ ನಲ್ಲಿ ಸಿದ್ದರಾಮಯ್ಯ ಅವರೇ, ಕೃಷ್ಣಾ ಕಣಿವೆ ನೀರಾವರಿ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುತ್ತೇನೆಂದು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದಿರಿ. ಆದರೆ ಕೊಟ್ಟಿದ್ದು ಬಿಡಿಗಾಸು. ಅಂಗೈಯಲ್ಲಿ ಆಕಾಶ ತೋರಿಸುವ ವಿಚಾರದಲ್ಲಿ ನೀವು ಪ್ರವೀಣರಲ್ಲವೇ ಎಂದು ವ್ಯಂಗ್ಯವಾಡಿದೆ.

ಅಧಿಕಾರಾವಧಿಯ ಕೊನೆಯಲ್ಲಿ “ಮುಖ್ಯಮಂತ್ರಿ 1 ಲಕ್ಷ ಮನೆ” ಯೋಜನೆಯನ್ನು ಬೆಂಗಳೂರು ನಗರದ ಬಡವರಿಗೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ ಬಜೆಟ್ನಲ್ಲಿ ಸೂಕ್ತ ಅನುದಾನ ಕಾಯ್ದಿರಿಸಲಿಲ್ಲ. ಮನೆಕಟ್ಟುವುದಕ್ಕೆ ಆಯ್ದುಕೊಂಡ ಜಾಗವೇ ವಿವಾದಗ್ರಸ್ಥವಾಗಿತ್ತು. ಸುಳ್ಳು ಹೇಳುವುದರಲ್ಲಿ ಪಿಎಚ್ಡಿ ನೀಡಬಹುದು ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ? ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ? ಭೂಮಿಯ ಮೇಲಿದೆಯೋ, ಮಂಗಳ ಗ್ರಹದಲ್ಲಿದೆಯೋ? ಕೇವಲ ಘೋಷಣೆ ಮಾಡಿದ ಮಾತ್ರಕ್ಕೆ ಮನೆ ನಿರ್ಮಾಣವಾಗುತ್ತದೆಯೇ? ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ? ಎಂದು ಬಿಜೆಪಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.

Related Articles

Leave a Reply

Your email address will not be published. Required fields are marked *

Back to top button