ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಶಾಕ್; ಎಲ್ಲ 3 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು
ನವದೆಹಲಿ: ಕಳೆದ ವಾರ ನಡೆದ ಉಪಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಎಲ್ಲಾ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು, ಬಿಜೆಪಿಗೆ ಬಹುದೊಡ್ಡ ಆಘಾತ ನೀಡಿದೆ. ಮಾತ್ರವಲ್ಲ, ಒಂದು ತೆರವಾದ ಲೋಕಸಭೆ ಸ್ಥಾನದ ರೇಸ್ನಲ್ಲಿಯೂ ಕಾಂಗ್ರೆಸ್ ತುಸು ಮುಂದಿದೆ.
ಈ ಉಪಚುನಾವಣೆಗಳನ್ನು ಮುಖ್ಯಮಂತ್ರಿ ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎಂದೇ ಪರಿಗಣಿಸಲಾಗಿತ್ತು. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರ ಹಿನ್ನೆಲೆಯಲ್ಲಿ ಬಿಜೆಪಿ ಪಾಲಿಗೆ ಇಲ್ಲಿ ಗೆಲ್ಲುವುದು ಅಗತ್ಯವಾಗಿತ್ತು.
ಬಿಜೆಪಿಯು ಕಳೆದ ವಾರಗಳಲ್ಲಿ ದೊಡ್ಡ ಮಟ್ಟದ ಚುನಾವಣಾ ಪ್ರಚಾರ ನಡೆಸಿತು. ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ್ದವರಲ್ಲಿ ಮುಖ್ಯಮಂತ್ರಿ ಮಾತ್ರವಲ್ಲದೆ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಇದ್ದರು.
ಆದರೆ ಇವಾವುದೂ ಫಲ ಕೊಟ್ಟಿಲ್ಲ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಜುಬಲ್-ಕೋಟ್ಖೈ ಸ್ಥಾನವನ್ನು ಕೂಡ ಬಿಜೆಪಿ ಕಳೆದುಕೊಂಡಿದೆ. ಅರ್ಕಿ ಮತ್ತು ಫತೇಪುರ್ನಲ್ಲಿಯೂ ಕಾಂಗ್ರೆಸ್ನ್ನು ಮಣಿಸಲು ಸಾಧ್ಯವಾಗಿಲ್ಲ.
ಸೋಲಿನ ಹೊಣೆಯನ್ನು ಹೊರುವುದಾಗಿ ಸಿಎಂ ಜೈರಾಮ್ ಠಾಕೂರ್ ಹೇಳಿದ್ದಾರೆ.