Breaking NewsLatest

ಜಾತಿಯ ಹೆಸರಲ್ಲಿ ಪ್ರೇಮಿಯ ನೆತ್ತರು ಹರಿಸಿದ ನರರಾಕ್ಷಸರು; ಬೆಳಗಾವಿಯಲ್ಲಿ ಹಣದ ಆಸೆಗೆ ಬಿತ್ತೆ ಯುವಕನ ಹೆಣ?

ಬೆಳಗಾವಿ: ಅದು ಧರ್ಮ ಮೀರಿ ಹುಟ್ಟಿದ ಪ್ರೇಮವಾಗಿತ್ತು. ಎದುರು ಬದುರು ಮನೆಯಲ್ಲಿ ಇದ್ದು, ಪ್ರೀತಿಸಿ ಎರಡು ವರ್ಷ ಸ್ವಚ್ಛಂದವಾಗಿ ಹಾರಾಡಿದ್ದ ಪ್ರೇಮಿಗಳ ಮಧ್ಯೆ ಇದ್ದಕ್ಕಿದ್ದಂತೆ ಧರ್ಮದ ನಶೆಯಲ್ಲಿ ತೇಲುವ ರಾಕ್ಷಸರು ಪ್ರವೇಶ ಮಾಡಿದ್ದರು. ಪ್ರೇಮಿಗಳಿಬ್ಬರ ಮಧ್ಯೆ ಬಂದಿದ್ದ ಆ ರಾಕ್ಷಸರು ಮಾಡಿದ್ದು ಮಾತ್ರ ಅತ್ಯಂತ ಕರಾಳ ಕೃತ್ಯ.

ಅರ್ಬಾಜ್ ಮುಲ್ಲಾ ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ನಿವಾಸಿ. ಅವನು ಪ್ರೀತಿಸಿದ್ದ ಹುಡುಗಿ ಕೂಡ ಖಾನಾಪುರ ಮೂಲದವಳು. ಈ ಇಬ್ಬರೂ ಕಳೆದ ಎರಡು ವರ್ಷದಿಂದ ಪ್ರೀತಿ ಪ್ರೇಮ ಅಂತ ಸುತ್ತಾಡಿದ್ರು, ಇವರ ಜೋಡಿ ನೋಡಿ ಹೊಟ್ಟೆಕಿಚ್ಚು ಪಟ್ಟವರು ಅದೆಷ್ಟೋ ಜನ ಇದ್ದಾರೆ ಎಂದು ಹೇಳಲಾಗುತ್ತಿದೆ.

ಈ ಅರ್ಬಾಜ್ ಮುಲ್ಲಾ ತಾಯಿ ನಾಜಿಮಾ ಶೇಕ್ ಉರ್ದು ಶಾಲೆಯ ಟೀಚರ್ ಆಗಿದ್ದವರು. 2018ರಲ್ಲಿ ನಾಜಿಮಾ ಅವರಿಗೆ ಬೆಳಗಾವಿಯಿಂದ ಖಾನಾಪುರಕ್ಕೆ ಟ್ರಾನ್ಸ್ ಪರ್ ಆಗುತ್ತದೆ. ಆಗ ತಾಯಿ ಜೊತೆ ಖಾನಪುರಕ್ಕೆ ಹೋದ ಅರ್ಬಾಜ್ ಮುಲ್ಲಾ ಮಾರುತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಮುಂದೆ ಎದುರುಗಡೆ ಮನೆ ಹುಡಗಿಯನ್ನು ಇಷ್ಟಪಡುತ್ತಾನೆ. ಆಕೆ ಕೂಡ ಇವನನ್ನ ತುಂಬಾ ಪ್ರೀತಿ ಮಾಡುವ ಹುಡುಗಿ. ಇವರ ಮೇಲೆ ಕೆಲ ರಾಕ್ಷಸರ ಕಣ್ಣು ಬಿದ್ದು ಸದ್ಯ ಅರ್ಬಾಜ್ ಮುಲ್ಲಾ ಹೆಣವಾಗಿ ಹೋಗಿದ್ದಾನೆ.

ಕಳೆದ ಎರಡು ವರ್ಷಗಳಿಂದ ಅರ್ಬಾಜ್ ಹಾಗೂ ಯುವತಿ ಪರಸ್ಪರ ಇಷ್ಟಪಟ್ಟು ಜೊತೆಯಲ್ಲೇ ಓಡಾಡುತ್ತಿದ್ದರು. ಯುವತಿ ಅರ್ಬಾಜ್ ಮನೆಗೆ ಕೂಡ ಬರುತ್ತಿದ್ದಳಂತೆ. ಆದ್ರೆ ವಿಷಯ ಮುಂದೆ ಎರಡೂ ಕುಟುಂಬಗಳಿಗೆ ಗೊತ್ತಾದಾಗ ಮತ್ತೆ ನಾಜಿಮಾ, ಮಗ ಅರ್ಬಾಜ್ ನೊಂದಿಗೆ ಬೆಳಗಾವಿಗೆ ಶಿಫ್ಟ್ ಆಗಿದ್ದರು. ಅರ್ಬಾಜ್ ಬೆಳಗಾವಿಯಲ್ಲೇ ಚಂದದ ಮನೆ ಒಂದನ್ನ ಕಟ್ಟಲು ಶುರು ಮಾಡಿದ್ದ. ಆದ್ರೆ ಕಳೆದ ಒಂದೂವರೆ ತಿಂಗಳಿನಿಂದ ಎಂಟ್ರಿ ಕೊಟ್ಟಿದ್ದ ಹಿಂದೂ ಸಘಟನೆ ಅಧ್ಯಕ್ಷನೊಬ್ಬ ಇಬ್ಬರಿಗೂ ಮುಳುವಾಗಿ ಹೋಗಿದ್ದ.


ಅರ್ಬಾಜ್ ಗೆ ಅದಾಗಲೇ ಬೆದರಿಕೆ ಕರೆ ಬರಲು ಶುರುವಾಗಿದ್ದವು,ಈ ಬಗ್ಗೆ ಸ್ನೇಹಿತರ ಮುಂದೆ ಕೂಡ ಅರ್ಬಾಜ್ ಹೇಳಿಕೊಂಡಿದ್ದ. ಸೆಪ್ಟೆಂಬರ್ 25ನೆ ತಾರೀಕು ಭಾನುವಾರ ಅರ್ಬಾಜ್ ಮೊಬೈಲ್ ಗೆ ಶ್ರೀರಾಮಸೇನೆ ಹಿಂದೂಸ್ತಾನ ಸಂಘಟನೆಯ ಮಹಾರಾಜ ಎನ್ನುವ ವ್ಯಕ್ತಿಯ ಕರೆ ಬಂದಿದೆ. ತಾಯಿ ನಾಜಿಮಾ ಫೋನ್ ನಲ್ಲಿ ಮಾತನಾಡಿದಾಗ ಮಗನ ಲವ್ ಮ್ಯಾಟರ್ ಸೆಟಲ್ ಮಾಡ್ತೀವಿ, ನಿಮ್ಮ ಮುಸ್ಲಿಂ ಮುಖಂಡರು ಇದ್ದಾರೆ ಕೂಡಲೇ ಖಾನಾಪುರಕ್ಕೆ ಬರುವಂತೆ ಮಹಾರಾಜ ತಿಳಿಸಿದ್ದನಂತೆ. ಆ ದಿನ ರಾತ್ರಿ ಯುವತಿಯ ತಂದೆ, ಮಹಾರಾಜ ಹಾಗೂ ಬಿರ್ಜಿ ಸೇರಿ ಹಲವರು ಅರ್ಬಾಜ್ ನ ಮೊಬೈಲ್ ವಶಕ್ಕೆ ಪಡೆದು ಯುವತಿಯ ಜೊತೆ ಇರುವ ಫೋಟೋ ಹಾಗೂ ವ್ಯಾಟ್ಸ್ ಆಪ್ ಮೆಸೇಜ್ ಡಿಲೀಟ್ ಮಾಡಿಸಿದ್ದಾರೆ. ಇಬ್ಬರೂ ಪರಸ್ಪರ ದೂರವಾಗಲು ನಿರ್ಧರಿಸಿದ್ದಾರೆ. ಪ್ರೀತಿಸುವ ಪ್ರೇಮಿಗಳ ಮದ್ಯೆ ಬಂದಿದ್ದ ವ್ಯಕ್ತಿಗಳು, ತಮ್ಮ ಧರ್ಮದ ಯುವತಿಯ ರಕ್ಷಣೆಗೆ ನೆಪದಲ್ಲಿ ಆ ರಾತ್ರಿ ದುಡ್ಡಿನ ಸೆಟಲ್ಮೆಂಟ್ ಕೂಡ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಅರ್ಬಾಜ್ ಸೆಪ್ಟೆಂಬರ್ 27ರಂದು ತನ್ನ ಕಾರು ಮಾರಾಟ ಮಾಡಿ ಹಣ ಕೂಡಿಟ್ಟುಕೊಂಡಿದ್ದ ಅಂತ ಮನೆಯವರು ಹೇಳುತ್ತಿದ್ದಾರೆ.

ನಾಜಿಮಾ ಶೇಕ್, ಅರ್ಬಜ್ ತಾಯಿ

ಆದ್ರೆ ರಾಜಿ ಸಂಧಾನದ ರಾತ್ರಿ ಅದ್ಯಾವ ಡಿಮ್ಯಾಂಡ್ ಇಡಲಾಗಿತ್ತು ಎಂಬುದನ್ನು ಪೊಲೀಸ್ ಮೂಲಗಳೇ ಹೇಳಬೇಕಿದೆ. ಸೆಪ್ಟೆಂಬರ್ 28ನೆ ತಾರೀಕು ತಾಯಿ ನಾಜಿಮಾ ಊರಲ್ಲಿ ಇರಲಿಲ್ಲ. ಬೆಳಗಾವಿಯ ಮನೆಯಲ್ಲಿ ಅಜ್ಜಿ ಜೊತೆ ಇದ್ದ ಅರ್ಬಾಜ್ ಸಂಜೆ 4.30ರ ಸುಮಾರಿಗೆ ಮನೆಯಿಂದ ಕಾಲ್ನಡಿಗೆಯಲ್ಲಿ ಹೊರ ಹೋಗಿದ್ದಾನೆ. ಹೀಗೆ ಹೋಗುವಾಗ ಅಜ್ಜಿಗೆ ಹುಷಾರಾಗಿ ಇರುವಂತೆ ಹೇಳಿದ್ದಾನೆ. ಅಲ್ಲದೆ ತನಗೆ ಬೆದರಿಕೆ ಕರೆ ಬರ್ತೀವೆ. ಹೋಗಿ ರಾಜಿ ಮಾಡಿಕೊಂಡು ಬರ್ತೀನಿ ಅಂತಲೂ ಹೇಳಿದ್ದಾನೆ. ರಾತ್ರಿ ತಾಯಿ ಫೋನ್ ಮಾಡಿದಾಗ, ರೈಲ್ವೆ ಟ್ರ್ಯಾಕ್ ಮ್ಯಾನ್ ಫೋನ್ ರಿಸೀವ್ ಮಾಡಿ ಇಲ್ಲೊಂದು ಬಾಡಿ ಬಿದ್ದಿದೆ. ಫೋನ್ ಇಲ್ಲೇ ಪಕ್ಕದಲ್ಲೇ ಇತ್ತು ಎಂದಿದ್ದಾನೆ. ಆಮೇಲೆ ತಾಯಿ ಹೋಗಿ ನೋಡಿದಾಗ ಬೆಳಗಾವಿಯಿಂದ ನಾಪತ್ತೆಯಾಗಿದ್ದ ಅರ್ಬಾಜ್ ಖಾನಪುರದ ರೈಲ್ವೆ ಟ್ರ್ಯಾಕ್ ಮೇಲೇ ತುಂಡು ತುಂಡಾಗಿ ಬಿದ್ದಿದ್ದ.

ನಾಜಿಮಾ ಶೇಕ್, ಅರ್ಬಜ್ ತಾಯಿ

ಹಗ್ಗ ಕಟ್ಟಿದ ಕೈ ಕಾಲುಗಳು, ತಲೆಗೆ ಬಿದ್ದಿರುವ ಏಟು ಹೀಗೆ ಮೇಲ್ನೋಟಕ್ಕೆ ಕೊಲೆ ಎನ್ನುವುದು ಗೊತ್ತಾಗುತ್ತಿತ್ತು. ಆದ್ರೆ ರಾತ್ರಿ ಸಿಕ್ಕ ಶವಕ್ಕೆ ಪೊಲೀಸರು ಬೆಳಗಿನವರೆಗೆ ತಮ್ಮ ವ್ಯಾಪ್ತಿಗೆ ಬರಲ್ಲ ಎನ್ನುತ್ತಾ ಕಾಲಹರಣ ಮಾಡಿದ್ದಾರೆ. ಆಮೇಲೆ ಕೇಸ್ ದಾಖಲಿಸಿಕೊಂಡ ಬೆಳಗಾವಿ ರೈಲ್ವೆ ಪೊಲೀಸರು ತಾಯಿಯಿಂದ ದೂರು ಪಡೆದು ತನಿಖೆ ಶುರು ಮಾಡಿದ್ದಾರೆ. ಸದ್ಯ ಪ್ರಕರಣ ರೈಲ್ವೆ ಪೊಲೀಸರಿಂದ ಸದ್ಯ ಬೆಳಗಾವಿ ಜಿಲ್ಲಾ ಪೊಲೀಸರಿಗೆ ಹಸ್ತಾಂತರವಾಗಿದೆ. ಈಗಾಗಲೇ ರೈಲ್ವೆ ಪೊಲೀಸರು ಕೊಲೆಗೆ ಸಂಬಂದಿಸಿದಂತೆ 30 ಜನರನ್ನ ವಿಚಾರಣೆ ನಡೆಸಿದ್ದಾರೆ. 8 ಜನ ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹಣಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಹೇಳಾಗುತ್ತಿದೆ, ಆದ್ರೆ ಅಧಿಕೃತ ಮಾಹಿತಿ ಮಾತ್ರ ಯಾವ ಪೊಲೀಸರು ನೀಡುತ್ತಿಲ್ಲ.

ಪ್ರೇಮ ಹಾಗೂ ಸ್ನೇಹಕ್ಕೆ ಧರ್ಮ ಎನ್ನುವುದು ಇಲ್ಲ. ಅಲ್ಲಿ ಕೇವಲ ಕಾಣುವುದು ಹೆಣ್ಣು-ಗಂಡು ಎನ್ನುವ ಎರಡು ಜಾತಿಗಳು ಮಾತ್ರ. ಆದರೆ ಧರ್ಮದ ಹೆಸರಿನಲ್ಲಿ ನೀಚ ಕೃತ್ಯವೊಂದು ಇಲ್ಲಿಯೂ ನಡೆದುಹೋಗಿದೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಯುವಕ ಯುವತಿಗೆ ಹಿಂಸೆ ನೀಡಿದ್ದಾರೆ. ತಾಯಿಯಿಂದ ಮಗನನ್ನು ಕಿತ್ತುಕೊಂಡಿದ್ದಾರೆ. ನಾಗರಿಕ ಸಮಾಜ ತಲೆ ತಗ್ಗಿಸುವ ಕಾರ್ಯ ಮಾಡಿದ್ದಾರೆ. ಇವರಿಗೆಲ್ಲಾ ತಕ್ಕ ಶಾಸ್ತಿ ಆಗಬೇಕು ಮುಂದೆ ಕೂಡ ಇಂತಹ ಘಟನೆಗಳು ಜರುಗಬಾರದು ಎಂಬುದು ಜನರ ಒತ್ತಾಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜಸ್ಟಿಸ್ ಫಾರ್ ಅರ್ಬಾಜ್ ಎನ್ನುವ ಕೂಗು ಟ್ರೆಂಡ್ ಆಗಿದೆ. ಈ ಕೃತ್ಯವನ್ನು ಜನರು ಖಂಡಿಸುತ್ತಿದ್ದಾರೆ. ಈ ಬಗ್ಗೆ ಬೆಳಗಾವಿ ರಾಜಕೀಯ ನಾಯಕರು ಇದುವರೆಗೂ ಮಾತನಾಡದೆ ಇರುವುದು ಕೂಡ ಎಷ್ಟೋ ಜನರನ್ನ ಕೆರಳಿಸಿದೆ ಎಂದು ಹೇಳಲಾಗುತ್ತಿದೆ.

Related Articles

Leave a Reply

Your email address will not be published.

Back to top button