ಪ್ರಯಾಣಿಕರ ಬಳಕೆಗೆ ಕೋವ್ಯಾಕ್ಸಿನ್ ಪರಿಗಣಿಸಿದ ಆಸ್ಟ್ರೇಲಿಯಾ
ನವದೆಹಲಿ: ಪ್ರಯಾಣಿಕರು ಕೋವ್ಯಾಕ್ಸಿನ್ ಲಸಿಕೆ ಬಳಸಲು ಆಸ್ಟ್ರೇಲಿಯಾ ತನ್ನ ಸಮ್ಮತಿ ನೀಡಿದೆ. ಅಂತಾರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧವನ್ನು ಆಸ್ಟ್ರೇಲಿಯಾ ಸಡಿಲಗೊಳಿಸಿದ್ದು, ಭಾರತದ ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರಯಾಣಿಕರ ಬಳಕೆಗೆ ಪರಿಗಣಿಸಿದೆ.
ಇದರಿಂದಾಗಿ, ವಿಶ್ವದ ಕೆಲವು ಕಟ್ಟುನಿಟ್ಟಾದ ಕೊರೊನಾವೈರಸ್ ಗಡಿ ನೀತಿಗಳ ಕಾರಣದಿಂದ 18 ತಿಂಗಳುಗಳಿಗಿಂತ ಹೆಚ್ಚು ಕಾಲ ಹೊರಗಡೆಯೇ ಇದ್ದ ಲಕ್ಷಾಂತರ ಆಸ್ಟ್ರೇಲಿಯನ್ನರು ಈಗ ಅನುಮತಿಯಿಲ್ಲದೆ ಪ್ರಯಾಣಿಸಲು ಅವಕಾಶ ಸಿಕ್ಕಿದ್ದು, ದೇಶಕ್ಕೆ ಆಗಮಿಸಿದ ನಂತರ ಕ್ವಾರಂಟೈನ್ ಆಗುವ ಅಗತ್ಯವೂ ಇಲ್ಲವಾಗಿದೆ.
ಕೋವ್ಯಾಕ್ಸಿನ್ ಲಸಿಕೆಯನ್ನುತುರತು ಬಳಕೆ ಯಾದಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸಭೆ ಬುಧವಾರ ನಡೆಯಲಿದ್ದು, ಅದಕ್ಕೂ ಮೊದಲೇ ಆಸ್ಟ್ರೇಲಿಯಾದ ಈ ನಿರ್ಧಾರ ಹೊರಬಿದ್ದಿದೆ.
ಭಾರತದ ಕೋವ್ಯಾಕ್ಸಿನ್ ಮತ್ತು ಚೀನಾದ ಲಸಿಕೆಯೊಂದನ್ನು ಪ್ರಯಾಣಿಕರ ಬಳಕೆಗೆ ಪರಿಗಣಿಸಿರುವ ಆಸ್ಟ್ರೇಲಿಯಾ, ಇದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಾಪಸಾತಿ ಮತ್ತು ಆಸ್ಟ್ರೇಲಿಯಾಕ್ಕೆ ನುರಿತ ಮತ್ತು ಕೌಶಲ್ಯರಹಿತ ಕೆಲಸಗಾರರ ಆಗಮನಕ್ಕೆ ಅನುಮೂಲ ಕಲ್ಪಿಸಲಿದೆ ಎಂದು ಆಸ್ಟ್ರೇಲಿಯಾ ಸರ್ಕಾರದ ಮಾಧ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.