ಮದುವೆಯಾದರೂ ಮೋದಿ ಒಬ್ಬಂಟಿಯಾಗಿರುವುದನ್ನು ನೀವೇಕೆ ಪ್ರಶ್ನಿಸುತ್ತಿಲ್ಲ?: ಸುಧಾಕರ್ಗೆ ಅಂಜಲಿ ನಿಂಬಾಳ್ಕರ್ ತಿರುಗೇಟು
ಬೆಂಗಳೂರು: ಮದುವೆಯಾದ ಮೇಲೂ ಒಬ್ಬಂಟಿಯಾಗಿಯೇ ಇರುವ ತಮ್ಮ ನಾಯಕ ನರೇಂದ್ರ ಮೋದಿಯ ನಡೆ ಬಗ್ಗೆ ಬಿಜೆಪಿಯ ಯಾರೂ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಟೀಕಿಸಿದ್ದಾರೆ.
ಬದುಕಿನ ಮಾದರಿಯಲ್ಲೇ ಆಗಿರುವ ಈ ಪಲ್ಲಟವನ್ನು ಯಾಕೆ ಯಾರೂ ಪ್ರಶ್ನಿಸುತ್ತಿಲ್ಲ ಎಂಬ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ ಈ ಗಂಡಸರಿಗೆಲ್ಲ ಕೌನ್ಸೆಲಿಂಗ್ ಅಗತ್ಯವಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಿಮಾನ್ಸ್ನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಮಹಿಳೆಯರ ಯೋಚನಾ ವಿಧಾನದಲ್ಲಿ ಆಗಿರುವ ಬದಲಾವಣೆ ಒಳ್ಳೆಯ ರೀತಿಯದ್ದಲ್ಲ ಎಂದುದಕ್ಕೆ ಅಂಜಲಿ ನಿಂಬಾಳ್ಕರ್ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತ, ಇಂದು ಪೋಷಕರು ನಮ್ಮ ಜತೆಗಿರುವುದನ್ನು ನಾವು ಬಯಸುತ್ತಿಲ್ಲ. ಆಧುನಿಕ ಮಹಿಳೆ ಒಬ್ಬಂಟಿಯಾಗಿರಲು ಇಷ್ಟಪಡುತ್ತಾಳೆ. ಮದುವೆಯಾದರೂ ಮಗುವಿಗೆ ಜನ್ಮ ನೀಡಲು ಬಯಸುತ್ತಿಲ್ಲ. ಆಲೋಚನಾ ಕ್ರಮದಲ್ಲಿನ ಈ ಪಲ್ಲಟ ಸರಿಯಿಲ್ಲ ಎಂದು ಸುಧಾಕರ್ ಹೇಳಿಕೆ ಕೊಟ್ಟಿದ್ದರು.
ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಶಾಸಕಿ, ಮಹಿಳೆಯನ್ನು ಆಕೆಯ ಆಯ್ಕೆಯೊಂದಿಗೆ ಇರಲು ಬಿಡಿ. ಆಕೆ ಹೇಗಿರಬೇಕೆಂಬುದನ್ನು ಬೇರೆಯವರು ನಿರ್ಧರಿಸುವ ಅಗತ್ಯವಿಲ್ಲ, ಆಕೆಯೇ ನಿರ್ಧರಿಸುತ್ತಾಳೆ ಎಂದು ಹೇಳಿದ್ದಾರೆ.