68 ವರ್ಷಗಳ ಬಳಿಕ ಟಾಟಾ ಒಡೆತನಕ್ಕೆ ಏರ್ ಇಂಡಿಯಾ; 18 ಸಾವಿರ ಕೋಟಿಗೆ ಮಾರಾಟ
ನವದೆಹಲಿ: ಏರ್ ಇಂಡಿಯಾ 18 ಸಾವಿರ ಕೋಟಿ ಮೊತ್ತಕ್ಕೆ ಟಾಟಾಗೆ ಮಾರಾಟವಾಗಿದೆ. ಈ ಸಂಬಂಧದ ಬಿಡ್ನ್ನು ಟಾಟಾ ಸನ್ಸ್ ಗೆದ್ದಿರುವ ಬಗ್ಗೆ ಇಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಇದರೊಂದಿಗೆ 68 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾ ಟಾಟಾ ಸಂಸ್ಥೆಯ ತೆಕ್ಕೆಗೆ ಮರಳಿದಂತಾಗಿದೆ. ಶೇ. 100ರಷ್ಟು ಷೇರುಗಲೊಂದಿಗೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಶೇ.50 ಷೇರು ಹೊಂದಿದ್ದ ಏರ್ ಇಂಡಿಯಾ ಸ್ಯಾಟ್ಸ್ ಏರ್ಪೋರ್ಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಇವು ಟಾಟಾ ಒಡೆತನಕ್ಕೆ ಬರಲಿವೆ.
ನಾಲ್ಕು ಬಿಡ್ಡರ್ಗಳು ಏರ್ ಇಂಡಿಯಾವನ್ನು ಕೊಂಡುಕೊಳ್ಳುವ ಬಿಡ್ನಲ್ಲಿ ಭಾಗಿಯಾಗಿದ್ದರಾದರೂ, ಅಂತಿಮ ಹಂತದಲ್ಲಿ ಇಬ್ಬರು ಬಿಡ್ಡರ್ಗಳು ಅಂದರೆ ಟಾಟಾ ಸನ್ಸ್ ಮತ್ತು ಸ್ಪೈಸ್ ಜೆಟ್ನ ಅಜಯ್ ಸಿಂಗ್ ಮಾತ್ರ ಇದ್ದರು. ಅಂತಿಮವಾಗಿ ಏರ್ ಇಂಡಿಯಾ ಟಾಟಾ ಸನ್ಸ್ ಪಾಲಾಗಿದೆ. ಏರ್ ಇಂಡಿಯಾ ಚರಾಸ್ತಿಯನ್ನು ಹೊರತುಪಡಿಸಿದ ಬಿಡ್ ಇದಾಗಿದೆ.
ಏರ್ ಇಂಡಿಯಾ ಮೇಲೆ ಒಟ್ಟು 61,562 ಕೋಟಿ ಸಾಲದ ಹೊರೆಯಿದ್ದು, ಇದರಲ್ಲಿ 15,300 ಕೋಟಿ ಸಾಲವನ್ನು ಟಾಟಾ ಸಂಸ್ಥೆ ಹೊರಬೇಕಾಗುತ್ತದೆ.
ಈ ವರ್ಷಾಂತ್ಯದ ವೇಳೆಗೆ ಈ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಜೆಆರ್ಡಿ ಟಾಟಾ ಅವರು 1932ರಲ್ಲಿ ಸ್ಥಾಪಿಸಿದ್ದ ಟಾಟಾ ಏರ್ಲೈನ್, ಸ್ವಾತಂತ್ರ್ಯಾನಂತರ 1948ರಲ್ಲಿ ಭಾಗಶಃ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿತು. 1953ರಲ್ಲಿ ರಾಷ್ಟ್ರೀಕರಣಗೊಂಡಿತು. 1962ರಲ್ಲಿ ಏರ್ ಇಂಡಿಯಾ ಎಂದು ನಾಮಕರಣವಾಯಿತು. 1977ರವರೆಗೂ ಜೆಆರ್ಡಿ ಟಾಟಾ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದರು.
ಏರ್ ಇಂಡಿಯಾವನ್ನು ಮತ್ತೆ ಖಾಸಗೀಕರಣಗೊಳಿಸುವ ಪ್ರಸ್ತಾಪಕ್ಕೆ 2017ರ ಜೂನ್ 28ರಂದು ಸರ್ಕಾರದ ಅಂಗೀಕಾರ ದೊರೆತ ಬಳಿಕ ಖಾಸಗೀಕರಣ ಪ್ರಕ್ರಿಯೆ ಆರಂಭಿಸಲು ಸಮಿತಿಯೊಂದರ ರಚನೆಯಾಯಿತು. ಶೇ.76ರಷ್ಟು ಷೇರು ಮಾರಾಟ ಪ್ರಸ್ತಾಪ 2018ರಲ್ಲಿ ಇತ್ತಾದರೂ, 2019ರ ಕೊನೆಯ ವೇಳೆಗೆ ಪೂರ್ಣ ಪ್ರಮಾಣದ ಷೇರು ಮಾರಾಟದ ನಿರ್ಧಾರಕ್ಕೆ ಸರ್ಕಾರ ಬಂತು. 2020ರ ಜನವರಿಯಲ್ಲಿ ಬಿಡ್ಗಳನ್ನು ಆಹ್ವಾನಿಸಲಾಗಿತ್ತು.
ಕಳೆದ ಎರಡು ವರ್ಷಗಳಲ್ಲಿ ಏರ್ ಇಂಡಿಯಾ 70 ಸಾವಿರ ಕೋಟಿ ನಷ್ಟ ಅನುಭವಿಸಿತ್ತು. ಪ್ರತಿ ದಿನ 20 ಕೋಟಿಯಷ್ಟು ನಷ್ಟವಿತ್ತು ಎಂದು ವರದಿಗಳಿವೆ. ಹಲವು ಬಿಕ್ಕಟ್ಟುಗಳನ್ನು ಎದುರಿಸಿದ ಬಳಿಕ ಅಂತಿಮವಾಗಿ ಏರ್ ಇಂಡಿಯಾ ಮಹಾರಾಜ ಮತ್ತೆ ಖಾಸಗಿ ತೆಕ್ಕೆಗೆ ಹೋಗುತ್ತಿದ್ದಾನೆ. ಟಾಟಾ ಸನ್ಸ್ ಪಾಲಿಗೆ ಇದು ಅತ್ಯಂತ ಭಾವುಕ ಘಳಿಗೆಯಾಗಿದೆ.
ಮರಳಿ ತಮ್ಮದಾಗುತ್ತಿರುವ ಏರ್ ಇಮಡಿಯಾವನ್ನು ರತನ್ ಟಾಟಾ ಸ್ವಾಗತಿಸಿದ್ದಾರೆ.