ಬಿಜೆಪಿ ಆಡಳಿತವಿರುವ 10 ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚುವರಿ ಕಡಿತ
ನವದೆಹಲಿ: ಬಿಜೆಪಿ ಆಡಳಿತವಿರುವ 10 ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಎರಡರ ಬೆಲೆಯಲ್ಲೂ ಹೆಚ್ಚುವರಿ ಕಡಿತ ಮಾಡಲಾಗಿದೆ. ಎರಡೂ ತೈಲ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಲ್ಲಿ 5ರಿಂದ 10 ರೂ.ವರೆಗೆ ಕಡಿತ ಘೋಷಿಸಿದ ಬೆನ್ನಲ್ಲೇ ಈ ಹೆಚ್ಚುವರಿ ಕಡಿತದ ನಿರ್ಧಾರ ಹೊರಬಿದ್ದಿದೆ.
ಅಸ್ಸಾಂ, ತ್ರಿಪುರಾ, ಮಣಿಪುರ, ಕರ್ನಾಟಕ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚುವರಿ ಕಡಿತ ಮಾಡಲಾಗಿದೆ.
ತೈಲಬೆಲೆಯಲ್ಲಿನ ನಿರಂತರ ಏರಿಕೆ ಜನಸಾಮಾನ್ಯರ ಜೇಬು ಸುಡುತ್ತಿದ್ದುದರ ನಡುವೆ ದೀಪಾವಳಿ ವೇಳೆಯಲ್ಲಿನ ಸರ್ಕಾರದ ಈ ನಿರ್ಧಾರ ಕೊಂಚ ನಿರಾಳ ಭಾವ ತಂದಿದೆ. ಇಂದಿನಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತ ಜಾರಿಗೆ ಬಂದಿದೆ.
ಅಸ್ಸಾಂ, ತ್ರಿಪುರಾ, ಮಣಿಪುರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಕೇಂದ್ರವು ಪ್ರಕಟಿಸಿದ ಕಡಿತದ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆಯನ್ನು ಲೀಟರ್ಗೆ ₹ 7 ರಷ್ಟು ಕಡಿಮೆ ಮಾಡಲಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ಪೆಟ್ರೋಲ್ ದರ ರೂ.95.50ಕ್ಕೆ ಇಳಿದಂತಾಗಿದೆ. ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಯನ್ನು ಲೀಟರ್ಗೆ 2 ರೂ. ಕಡಿಮೆ ಮಾಡಲಾಗುವುದು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಹೇಳಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ತಮ್ಮ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡಬೇಕೆಂದು ರಾಜ್ಯಗಳು ಬಹಳ ಹಿಂದಿನಿಂದಲೂ ಕೇಂದ್ರವನ್ನು ಒತ್ತಾಯಿಸಿದ್ದವು. ಕಳೆದ ಕೆಲವು ತಿಂಗಳುಗಳಿಂದ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100 ರೂ. ದಾಟಿದ್ದು, 120ರವರೆಗೂ ಮುಟ್ಟಿದೆ. ಡೀಸೆಲ್ ಬೆಲೆಯೂ ಮೂರು ಮಹಾನಗರಗಳಲ್ಲಿ 100ರ ಗಡಿ ದಾಟಿದೆ.